ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಮಾತನಾಡಿದ್ದು ರೆಕಾರ್ಡ್ ಆಗಿಲ್ಲ: ಸಭಾಪತಿ ಹೊರಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿ ಎಂಎಲ್​ಸಿ ಸಿ.ಟಿ.ರವಿ ಅವರು ಮಾತನಾಡಿದ್ದ ಬಗ್ಗೆ ಯಾವುದೇ ರೆಕಾರ್ಡ್​ ಇಲ್ಲ. ಆದರೆ, ಅಶ್ಲೀಲ ಪದ ಬಳಸಿದ್ದಾರೆ ಎಂದು ನಾಲ್ವರು ಸಾಕ್ಷಿ ಹೇಳಿದ್ದಾರೆ ಎಂದು ವಿಧಾನಪರಿಷತ್​​ ಸಭಾಪತಿ ಬಸವರಾಜ ಹೊರಟ್ಟಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಿ ಟಿ ರವಿಯವರು ಮಾತನಾಡಿದ್ದು ಆಡಿಯೋ ರೆಕಾರ್ಡ್​ ಆಗಿಲ್ಲ ಸಾಕ್ಷಿಗಳು ಮಾತ್ರ ಇವೆ. ರೆಕಾರ್ಡ್​ ಹುಡುಕಿದ್ದೇನೆ ನಮಗೆ ಆಡಿಯೋ ಸಿಕ್ಕಿಲ್ಲ. ನಾಲ್ಕು ಜನರು ಸಾಕ್ಷಿ ಹೇಳಿದ್ದಾರೆ. ಸಿಟಿ ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಇಬ್ಬರ ದೂರನ್ನೂ ಪಡೆದಿದ್ದೇವೆ ಎಂದು ತಿಳಿಸಿದರು.

ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ, ಕಾಂಗ್ರೆಸ್​ನವರು ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ಆಯ್ತು, ಗಲಾಟೆ ಹಿನ್ನೆಲೆ ಕಲಾಪ ಮುಂದೂಡಿದ್ವಿ. ಅವಾಗ ಇದೆಲ್ಲ ಗಲಾಟೆ ಆಗಿದೆ. ಸಂಜೆ 6 ಗಂಟೆಗೆ ಸಿಟಿ ರವಿ ಬಂಧನವಾಗಿರುವ ಬಗ್ಗೆ ಮಾಹಿತಿ ಬಂತು ಎಂದರು.

ನಾನು ಲಕ್ಷ್ಮೀ ಹೆಬ್ಬಾಳ್ಕರ್​ ಹಾಗೂ ಸಿಟಿ ರವಿ ಅವರನ್ನು ಕರೆದು ಮಾತನಾಡಿದೆ‌. ಇದನ್ನು ಇಲ್ಲಿಗೆ ಮುಗಿಸೋಣ ಅಂತ ಸಲಹೆ ನೀಡಿದೆ. ಈ ರೀತಿ ಆಗಿರುವುದು ಮೊದಲ ಸಲ. 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಅನ್ಸತ್ತೆ ಎಂದು ಬಸವರಾಜ ಹೊರಟ್ಟಿ ಬೇಸರ ಹೊರಹಾಕಿದರು.

ನಾನು ಯಾರ ಪರವೂ ಇಲ್ಲ, ಎರಡು ಕಡೆ ಯೋಚನೆ ಮಾಡಿದ್ದೇನೆ. ಇದು ಕಡ್ಡಿ ಹೋಗಿ ಗುಡ್ಡ ಆಯ್ತು. ಬೇಲಿಯೇ ಎದ್ದು ಹೊಲ ಮೇಯ್ದರೆ ಏನಾಗತ್ತೆ. ಜನ‌ ನಮ್ಮನ್ನು ನೋಡುತ್ತಾರೆ. ಶಾಸಕರು ನಡವಳಿಕೆ ತಿದ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!