ಜ್ಞಾನಭಾರತಿ ಆವರಣದಲ್ಲಿ ಪ್ರಯಾಣಿಕರ ತಂಗುದಾಣದ ಕೊರತೆ: ವಿವಿ ವಿದ್ಯಾರ್ಥಿಗಳ ಪರದಾಟ

ಹೊಸದಿಗಂತ ವರದಿ,ಬೆಂಗಳೂರು:

  • ವರದಿ: ನಂದಿನಿ ಎನ್.

ದೇಶದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಸ್ ಸ್ಟಾಪ್ ಕೊರತೆ ಎದ್ದುಕಾಣುತ್ತಿದೆ. ಜ್ಞಾನಭಾರತಿ ಆವರಣದಲ್ಲಿ ವ್ಯವಸ್ಥಿತ ಬಸ್‌ ನಿಲ್ದಾಣಗಳಿಲ್ಲದ ಕಾರಣ ಸಾವಿರಾರು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಂಗುದಾಣಗಳಿಲ್ಲದ ಕಾರಣ ಮಳೆ-ಚಳಿ, ಬಿಸಿಲೆನ್ನದೆ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಕೆ.ಆರ್.ಮಾರ್ಕೆಟ್ ಮತ್ತು ಮೆಜೆಸ್ಟಿಕ್‌ನಿಂದ ದೊಡ್ಡಬಸ್ತಿ, ಉಲ್ಲಾಳ, ಮಲ್ಲತ್ತಹಳ್ಳಿಗೆ ನಿರಂತರ ಬಸ್‌ಗಳಿದ್ದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಮಾರ್ಗವಾಗಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತದೆ. ಬಿಎಂಟಿಸಿ ಬಸ್‌ಗಳ ನಿರಂತರ ಸಂಚಾರವಿದ್ದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಸಾರವಾಗಿ ಜ್ಞಾನಭಾರತಿ ಆವರಣದಲ್ಲಿ 5ಕ್ಕೂ ಹೆಚ್ಚು ಕಡೆ ಬಸ್ ನಿಲುಗಡೆಯಾಗಲಿದೆ. ಆದರೆ ಆ ನಿಲುಗಡೆಗಳಲ್ಲಿ ಸಮರ್ಪಕ ಬಸ್‌ ನಿಲ್ದಾಣಗಳ ನಿರ್ಮಾಣವಾಗದ ಹಿನ್ನೆಲೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ತೊಂದರೆಗೀಡಾಗಿದ್ದಾರೆ.

5 ಕಡೆ ಬಸ್ ಸ್ಟಾಪ್:
ಬಿಎಂಟಿಸಿ ಬಸ್‌ಗಳು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಅನುಕೂಲಕ್ಕಾಗಿ ಜ್ಞಾನಭಾರತಿ ಆವರಣದಲ್ಲಿ ವಿಶ್ವವಿದ್ಯಾಲಯ ಮುಖ್ಯದ್ವಾರ, ಯುಸಿಪಿಇ ಕ್ರೀಡಾಂಗಣ, ಮುನೇಶ್ವರ ದೇವಸ್ಥಾನ, ವಿವಿ ಮುಖ್ಯಕಚೇರಿ, ಕ್ವಾಟ್ರಸ್‌ನಲ್ಲಿ ನಿಲುಗಡೆಯಾಗಲಿದೆ. ಆದರೆ ಈ ನಿಲುಗಡೆಗಳಲ್ಲಿ ಕ್ವಾಟ್ರಸ್ ಮತ್ತು ಮುಖ್ಯದ್ವಾರ ಹೊರತುಪಡಿಸಿ ಉಳಿದ ಮೂರು ನಿಲುಗಡೆಗಳಲ್ಲಿ ಬಸ್‌ನಿಲ್ದಾಣಗಳ ನಿರ್ಮಾಣವಾಗಿಲ್ಲ. ಮೂರು ನಿಲುಗಡೆಗಳು ವಿಶ್ವವಿದ್ಯಾಲಯ ಒಳಭಾಗದಲ್ಲಿದೆ. ಸಾಕಷ್ಟು ವಿದ್ಯಾರ್ಥಿಗಳು ಬಿಎಂಟಿಸಿ ಬಸ್‌ಗಳ ಮೇಲೆ ಅವಲಂಭಿತವಾಗಿದೆ. ತಂಗುದಾಣಗಳಿಲ್ಲದೇ ಬಿಸಿಲಲ್ಲೇ ನಿಂತು ಬಸ್‌ಗಾಗಿ ಕಾಯುವಂತಾಗಿದೆ. ಮಳೆಗಾಲದಲ್ಲಂತೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಮಸ್ಯೆಯಾಗಲಿದೆ.

ಜ್ಞಾನಭಾರತಿ ಆವರಣದಲ್ಲಿ ನಿರಂತರವಾಗಿ ಬಸ್ ಸಂಚಾರವಿದ್ದು ಪ್ರತಿ 10 – 20 ನಿಮಿಷಗಳಿಗೊಂದು ಬಸ್‌ಗಳು ಸಂಚರಿಸಲಿದೆ. ಈ ಅವಧಿಯಲ್ಲಿ ಬಸ್‌ಗಳಿಗೆ ಕಾಯುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿ ಸೇರಿ ಸಾರ್ವಜನಿಕರು ಬಸ್ ಸ್ಟಾಪ್‌ಗಳಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದೆ, ನಿಂತಕೊಂಡೆ ಬಸ್‌ಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ ಬಹುತೇಕರು ಸಾರ್ವಜನಿಕ ಸಾರಿಗೆ ಮೇಲೆ ಅವಲಂಬಿತರಾಗಿದ್ದಾರೆ.

ವಿವಿಯಲ್ಲಿ ನಿರ್ಮಾಣವಾಗಲದೆ ಇ- ಬಸ್ ಸ್ಟಾಪ್:
ಜ್ಞಾನಭಾರತಿಯಲ್ಲಿ ವಿದ್ಯಾರ್ಥಿಗಳ ಬಸ್ ನಿಲ್ದಾಣ ಸಮಸ್ಯೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಅನೇಕ ಖಾಸಗಿ ಕಂಪನಿಗಳ ಜತೆ ಒಡಂಬಡಿಕೆಗೆ ಮುಂದಾಗಿದೆ. ಸಿಎಸ್‌ಆರ್ ಅನುದಾನದಡಿ ವಿಶ್ವವಿದ್ಯಾಲಯದಲ್ಲಿ ಇ- ಬಸ್ ಸ್ಟಾಪ್‌ಗಳನ್ನು ನಿರ್ಮಿಸಲು ತೀರ್ಮಾನಿಸಿದೆ. ಈ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ಕೆಲವೇ ತಿಂಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಇ-ಬಸ್ ಸ್ಟಾಪ್‌ಗಳು ನಿರ್ಮಾಣವಾಗಲಿದೆ. ಅಲ್ಲದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಅನುಕೂಲಕ್ಕೆ ಇವಿ ಬಸ್‌ಗಳ ಸಂಚಾರ ಕೂಡ ಆರಂಭಿಸಲಾಗುವುದು. ಅಲ್ಲದೇ ಯೂಲು ಸಂಸ್ಥೆ ಜತೆ ಚರ್ಚೆ ನಡೆಯುತ್ತಿದ್ದು, ಜ್ಞಾನಭಾರತಿ ಆವರಣದಲ್ಲಿ ಇವಿ ವಾಹನಗಳ ಸ್ಟಾಂಡ್ ಕೂಡ ನಿರ್ಮಿಸಲಾಗುವುದು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೀಘ್ರದಲ್ಲಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಸುಸಜ್ಜಿತ ಇ- ಬಸ್ ಸ್ಟಾಪ್‌ಗಳನ್ನು ನಿರ್ಮಾಣ ಮಾಡಲಾಗುವುದು, ಈಗಾಗಲೇ ಈ ಕಾರ್ಯ ಶುರುವಾಗಿದೆ. ಆದಷ್ಟು ಬೇಗ ಸ್ಟಾಪ್‌ಗಳನ್ನು ನಿರ್ಮಿಸಲಾಗುವುದು, ಇ-ಬಸ್ ಸ್ಟಾಪ್‌ನಲ್ಲಿ ಉಚಿತ ವೈ-ಫೈ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬಸ್ ಸಂಚಾರದ ಡಿಜಿಟಲ್ ಮಾಹಿತಿ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬೆಂಗಳೂರುವಿಶ್ವ ವಿದ್ಯಾಲಯ ಕುಲಪತಿ ಡಾ.ಜಯಕರ ಎಸ್.ಎಂ ಹೇಳಿದ್ದಾರೆ.

ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಬಸ್ ತಂಗುದಾಣಗಳಿಲ್ಲದೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ವಿಶ್ವವಿದ್ಯಾಲಯಕ್ಕೆ ಸುತ್ತಮುತ್ತಲಿನ ಗ್ರಾಮಾಂತರ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಸಾರ್ವಜನಿಕ ಸಂಚಾರದ ಮೇಲೆ ಅವಲಂಬಿತರಾಗಿದ್ದಾರೆ. ವಿದ್ಯಾರ್ಥಿಗಳ ಬೇಡಿಕೆ ಪರಿಗಣಿಸಿ ಆಡಳಿತ ಮಂಡಳಿ ಶೀಘ್ರದಲ್ಲಿ ಶಾಶ್ವತ ಪರಿಹಾರ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಮುಖಂಡ ಲೋಕೇಶ್ ರಾಮ್ ಒತ್ತಾಯ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!