ಹೊಸದಿಗಂತ ಡಿಜಿಟಲ್ ಡೆಸ್ಕ್:
22 ವರ್ಷದ ಯುವಕನೊಬ್ಬ ತನ್ನನ್ನು ತಾನೇ ಕಿಡ್ನಾಪ್ ಆಗಿದ್ದೇನೆಂದು ಹೇಳಿಕೊಂಡು ಮನೆಯವರನ್ನು ನಂಬಿಸಿದ್ದಾನೆ.
ತನ್ನ ಕುಟುಂಬದವರು ತಾನು ಕಾಣೆಯಾದರೆ ನಿಜಕ್ಕೂ ಬೇಸರಗೊಳ್ಳುತ್ತಾರಾ ಎಂದು ನೋಡಲು ಆತ ಈ ನಾಟಕವಾಡಿದ್ದಾನೆ. ತನ್ನನ್ನು ಮನೆಯವರು ಪ್ರೀತಿಸುತ್ತಾರಾ ಎಂದು ಪರೀಕ್ಷಿಸಲು ಆತ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ ತನ್ನನ್ನು ಅನೂಪ್ ಪಟೇಲ್ ಎಂದು ಹೇಳಿಕೊಂಡಿದ್ದು, ಗೋಮತಿನಗರ ರೈಲ್ವೆ ನಿಲ್ದಾಣದ ಬಳಿ ತನ್ನನ್ನು ಯಾರೋ ಅಪಹರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅನೂಪ್ ತನ್ನನ್ನು ಆಟೋದಲ್ಲಿ ಬಂದವರು ಅಪಹರಣ ಮಾಡಿದರು ಎಂದಿದ್ದಾನೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ಕೆಲವೇ ನಿಮಿಷಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪೊಲೀಸರು ಸುಳಿವಿಗಾಗಿ ಹುಡುಕಾಟ ನಡೆಸಿದರು. ಅನೂಪ್ ಪಟೇಲ್ ಒದಗಿಸಿದ ಮೊಬೈಲ್ ಸಂಖ್ಯೆಯನ್ನು ಬಳಸಿ, ಪೊಲೀಸರು ಆತನ ಸ್ಥಳವನ್ನು ಪತ್ತೆಹಚ್ಚಿದರು.
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಅನೂಪ್ ಯಾವುದೇ ಟೆನ್ಷನ್ ಇಲ್ಲದೆ ಶಾಂತವಾಗಿ ಕುಳಿತಿರುವುದನ್ನು ಕಂಡು ಆಶ್ಚರ್ಯಚಕಿತರಾದರು. ವಿಚಾರಣೆ ನಡೆಸಿದಾಗ ಇಡೀ ಕಥೆಯನ್ನು ತಾನೇ ಹೆಣೆದಿರುವುದಾಗಿ ಒಪ್ಪಿಕೊಂಡಿದ್ದಾನೆ.