ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಸರಗೋಡು ಜಿಲ್ಲಾ ಪ್ರಾಥಮಿಕ ಶಿಕ್ಷಾವರ್ಗ ಕಾರ್ಯಕ್ರಮವು ಕೂಡ್ಲು ರಾಮದಾಸನಗರ ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಪರಿಸರದಲ್ಲಿ ಡಿ.21ರಂದು ಆರಂಭಗೊಂಡಿದೆ.
ಶಿಕ್ಷಾವರ್ಗವು ಡಿ.28ರಂದು ಸಾರ್ವಜನಿಕ ಸಭೆ ನಡೆದು ಡಿ.29ರಂದು ಸಮಾಪ್ತಿಯಗಲಿದೆ. ಒಟ್ಟು 9 ದಿನಗಳ ಕಾಲ ಈ ಶಿಕ್ಷಾವರ್ಗ ಜರಗಲಿದೆ. ಪ್ರಾಥಮಿಕ ಶಿಕ್ಷಾವರ್ಗವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ, ಭಾರತೀಯ ಸೇನೆಯು ದೇಶ ರಕ್ಷಣೆಯ ಕಾರ್ಯವನ್ನು ನಿರ್ವಹಿಸಿದರೆ ಸಂಘವು ಧರ್ಮ ರಕ್ಷಣೆಯ ಸೇವೆಯನ್ನು ನಿರಂತರವಾಗಿ ಹಾಗೂ ನಿರಾತಂಕವಾಗಿ ಮುಂದುವರಿಸುತ್ತಿದೆ. ಹಿಂದು ಸಮಾಜದ ಸವಾಲುಗಳನ್ನು ಎದುರಿಸಿ ಸಂಘವು ದೇಶದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಮಹತ್ತರ ಕಾರ್ಯಗಳನ್ನು ಸಾಧಿಸುತ್ತಿದೆ ಎಂದು ತಿಳಿಸಿದರು.
ಸಂಘದಿಂದ ಸಮಾಜ ಪರಿವರ್ತನೆ ಕಾರ್ಯ: ಕೆ.ಕೆ.ಬಲರಾಮ್
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇರಳ ಉತ್ತರ ಪ್ರಾಂತ ಸಂಘಚಾಲಕ್, ವಕೀಲ ಕೆ.ಕೆ. ಬಲರಾಮ್ ಬೌದ್ಧಿಕ್ ನೀಡಿ, ವ್ಯಕ್ತಿ ನಿರ್ಮಾಣದಿಂದ ದೇಶ ನಿರ್ಮಾಣ ಎಂಬ ಧ್ಯೇಯವನ್ನು ಮುಂದಿರಿಸಿ ಸಂಘವು ಸಮಾಜ ಪರಿವರ್ತನೆಯ ಕೆಲಸವನ್ನು ನಡೆಸುತ್ತಿದೆ. ಅದಕ್ಕೆ ಬೇಕಾದ ಕಾರ್ಯಕರ್ತರ ನಿರ್ಮಾಣಕ್ಕಾಗಿ ಇಂತಹ ವರ್ಗಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೊಂದು ಶಿಲ್ಪಶಾಲೆಯಗಿದ್ದು , ಇಂತಹ ಕಾರ್ಯ ವ್ಯವಸ್ಥೆಯು ಬೇರೆ ಎಲ್ಲೂ ಲಭಿಸಲು ಸಾಧ್ಯವಿಲ್ಲ ಎಂದು ನುಡಿದರು.
ವರ್ಗಾಧಿಕಾರಿ ಡಾ. ರವಿಪ್ರಸಾದ್, ಜಿಲ್ಲಾ ಸಂಘಚಾಲಕ್ ಕೆ. ಪ್ರಭಾಕರನ್ ಮಾಸ್ಟರ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.