ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್‌ಸ್ಟಾಗ್ರಾಮ್ ರೀಲ್ಸ್ ಓಪನ್ ಆಗ್ತಿದಂತೆ ಒಂಟಿಯಾಗಿ ಪರ್ವತದತ್ತ ನಡೆದು ಹೋಗುತ್ತಿರುವ ಪೆಂಗ್ವಿನ್ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋ ನೋಡಿ ಹಲವರು ಕರುಣೆಯಿಂದ ಮರುಗಿದರೆ, ಇನ್ನೂ ಕೆಲವರು ಇದನ್ನು ಮೀಮ್‌ಗಳಾಗಿ ಬಳಸಿಕೊಳ್ಳುತ್ತಿದ್ದಾರೆ. “ಈ ಪೆಂಗ್ವಿನ್ ಯಾಕೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದೆ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆದರೆ, ವೈರಲ್ ಆಗಿರುವ ಈ ದೃಶ್ಯದ ಹಿಂದಿನ ನಿಜ ಕಥೆ ಮಾತ್ರ ಇಂಟ್ರೆಸ್ಟಿಂಗ್ ಆಗಿದೆ.
ಈ ದೃಶ್ಯ ಇತ್ತೀಚಿನ ಘಟನೆ ಅಲ್ಲ. ಇದು ಪ್ರಸಿದ್ಧ ನಿರ್ದೇಶಕ ವರ್ನರ್ ಹೆರ್ಜೋಗ್ ಅವರ ‘ಎನ್ಕೌಂಟರ್ ಎಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಎಂಬ ಡಾಕ್ಯುಮೆಂಟರಿಯ ಒಂದು ಭಾಗ. ಸುಮಾರು 19 ವರ್ಷಗಳ ಹಿಂದೆ ಚಿತ್ರೀಕರಿಸಲಾದ ಈ ದೃಶ್ಯವನ್ನು 2010ರಲ್ಲಿ ಯೂಟ್ಯೂಬ್‌ನಲ್ಲಿ “ಡಿಪ್ರೆಸ್ಡ್ ಪೆಂಗ್ವಿನ್” ಎಂಬ ಶೀರ್ಷಿಕೆಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಆಗಲೂ ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. 2014ರಲ್ಲಿ ಮತ್ತೊಮ್ಮೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಸಾಮಾನ್ಯವಾಗಿ ಅಡೆಲೀ ಪೆಂಗ್ವಿನ್‌ಗಳು ತಮ್ಮ ಗುಂಪಿನೊಂದಿಗೆ ಸಮುದ್ರದ ಸಮೀಪದಲ್ಲೇ ಇರುತ್ತವೆ. ಆದರೆ ಈ ವಿಡಿಯೋದಲ್ಲಿ ಪೆಂಗ್ವಿನ್ ಗುಂಪಿನಿಂದ ಬೇರ್ಪಟ್ಟು ಸಾಗರದ ಕಡೆಗೆ ಚಲಿಸದೆ ಸುಮಾರು 70 ಕಿಲೋಮೀಟರ್ ದೂರದ ಪರ್ವತದತ್ತ ಸಾಗಿರುವುದು ಕಾಣುತ್ತದೆ.
ವನ್ಯಜೀವಿ ತಜ್ಞರ ಪ್ರಕಾರ, ಕೆಲವೊಮ್ಮೆ ದಿಕ್ಕು ತಪ್ಪುವುದು, ಗೊಂದಲ ಅಥವಾ ನರ ಸಂಬಂಧಿ ಸಮಸ್ಯೆಗಳ ಕಾರಣಕ್ಕೆ ಇಂತಹ ನಡವಳಿಕೆ ಕಂಡುಬರುತ್ತದೆ. ಕೆಲವರು ಯುವ ಪೆಂಗ್ವಿನ್‌ಗಳು ಹೊಸದನ್ನು ಅನ್ವೇಷಿಸುವ ಉತ್ಸಾಹದಲ್ಲೂ ಈ ರೀತಿ ವರ್ತಿಸಬಹುದು ಎನ್ನುತ್ತಾರೆ.
ಇಂಟರ್ನೆಟ್ ಈ ವಿಡಿಯೋವನ್ನು ಅತ್ಯಂತ ಸ್ಪೂರ್ತಿದಾಯಕವಾಗಿ ಪರಿವರ್ತಿಸಿದ್ದು, ಪೆಂಗ್ವಿನ್ ತನ್ನೊಳಗಿನ ಮನುಷ್ಯನನ್ನು ಕಂಡುಹಿಡಿದಿದೆ ಎಂದು ಕೆಲವು ಕಾಮೆಂಟ್ ಮಾಡಿದ್ದಾರೆ. ಇನೂ ಕೆಲವ್ರು ಸ್ವಾತಂತ್ರ್ಯದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. ‘ತಾನು ಬಯಸಿದ್ದನ್ನು ಅನುಸರಿಸಲು ನಿರ್ಧರಿಸಿದೆ’, ಹಾಗೆಯೇ ಮಾನವರು “ ಜೀವಂತ ಮತ್ತು ಸ್ವತಂತ್ರ ” ಭಾವನೆ ಮೂಡಿಸುವ ಕೆಲಸವನ್ನು ಮಾಡಬೇಕು ಎಂದೂ ಇನ್ನು ಕೆಲವ್ರು ಕಾಮೆಂಟ್ ಮಾಡಿದ್ದಾರೆ.



