ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾಬ್ ಚಾಲಕನೊಬ್ಬ ಪ್ರಯಾಣದ ವೇಳೆ ನಿದ್ದೆಗೆ ಜಾರಿದ್ದ ಯುವತಿಯನ್ನು ಅಪ್ಪಿಕೊಂಡು, ತುಟಿಗೆ ಮುತ್ತು ಕೊಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿದ್ಯಾರ್ಥಿನಿಯೊಬ್ಬಳು ತನ್ನ ಅಜ್ಜಿಯ ಮನೆಗೆ ಪ್ರಯಾಣಿಸಲು ಕ್ಯಾಬ್ ಬುಕ್ ಮಾಡಿದ್ದಳು. ಆಗ ಸಮಯ ಮಧ್ಯರಾತ್ರಿ 1.45 ಆಗಿತ್ತು. ದೊಡ್ಡಕಲ್ಲಸಂದ್ರದ ಕೋಣನಕುಂಟೆ ಕ್ರಾಸ್ ಬಳಿ ಕ್ಯಾಬ್ ಇದ್ದಕ್ಕಿದ್ದಂತೆಯೇ ಸ್ಟಾಪ್ ಆಗಿತ್ತು.
ಹಿಂಬದಿಯ ಸೀಟ್‌ನಲ್ಲಿ ತುಂಬಾ ಲಗೇಜ್ ತುಂಬಿದ್ದ ಯುವತಿ ಮುಂಬದಿ ಡ್ರೈವರ್ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದಳು. ಈ ವೇಳೆ ಚಾಲಕ ಮೊಹಮ್ಮದ್ ವಸೀಮ್ ಎಂಬಾತ ರಸ್ತೆ ಮಧ್ಯದಲ್ಲಿ ಗಾಡಿ ನಿಲ್ಲಿಸಿ, ಆಕೆಯನ್ನು ಹಗ್ ಮಾಡಿ ತುಟಿಗೆ ಮುತ್ತು ಕೊಟ್ಟಿದ್ದಾನೆ. ಎರಡನೇ ಬಾರಿ ಮುತ್ತು ಕೊಟ್ಟ ನಂತರ ಆಕೆಗೆ ಎಚ್ಚರ ಆಗಿದೆ. ನನ್ನನ್ನು ಏಕೆ ಹಗ್ ಮಾಡಿದ್ದೀರಿ ಎಂದು ಆಕೆ ರೇಗಿದ್ದಾಳೆ.
ನಂತರ ನಾನು ಏನನ್ನೋ ತೆಗೆದುಕೊಳ್ಳಲು ಬಂದಿದ್ದೆ, ಹಗ್ ಮಾಡಿಲ್ಲ, ಮುತ್ತಿಟ್ಟಿಲ್ಲ ಎಂದು ವಸೀಮ್ ಹೇಳಿದ್ದಾನೆ. ಆದರೆ ಹತ್ತಾರು ಬಾರಿ ಕೂಗಿ ಆಕೆ ಕೇಳಿದ ನಂತರ ಹೌದು, ತಪ್ಪು ಮಾಡಿದೆ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.
ಸ್ನೇಹಿತೆಯ ಮನೆಗೆ ಹೋಗಿದ್ದೆ, ಅಲ್ಲಿಂದ ಮಧ್ಯರಾತ್ರಿ ಅಜ್ಜಿಯ ಮನೆಗೆ ಹೊರಟೆ, ಸ್ನೇಹಿತೆ ಕ್ಯಾಬ್ ಬುಕ್ ಮಾಡಿ ಕೊಟ್ಟಿದ್ದಳು. ಕ್ಯಾಬ್ ಚಾಲಕ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಕ್ಯಾಬ್ ಬಾಗಿಲು ಲಾಕ್ ಮಾಡಿದ್ದಾನೆ. ಕಿರುಚಾಡಿದ ನಂತರ ವಾಹನವನ್ನು ನಿಲ್ಲಿಸಿದ್ದಾನೆ. ನಾನು ತಕ್ಷಣವೇ ಕ್ಯಾಬ್‌ನಿಂದ ಇಳಿದುಬಿಟ್ಟೆ. ಆತ ನನ್ನ ಲಗೇಜ್‌ನ ಜೊತೆ ಗಾಡಿ ಓಡಿಸಿಕೊಂಡು ಹೋದ. ಆಟೋದಲ್ಲಿ ಅಜ್ಜಿ ಮನೆ ತಲುಪಿ ನಂತರ ಊಬರ್‌ಗೆ ದೂರು ಕೊಟ್ಟೆ. ಚಾಲಕನ ಸ್ನೇಹಿತರು ನನ್ನ ಲಗೇಜ್ ವಾಪಾಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಮೊಹಮ್ಮದ್ ವಸೀಮ್‌ಗಾಗಿ ಹುಡುಕಾಟ ನಡೆಸಿದ್ದಾರೆ.



