ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರ ಹಾಗು ರೈಲ್ವೇ ಇಲಾಖೆಯ ಪಾಲಿಗೆ ಹೊಸ ಇತಿಹಾಸ ನಿರ್ಮಾಣವಾಗಲಿದ್ದು,ಎರಡು ದಶಕಗಳಿಂದ ಆಗುತ್ತಿರುವ ಪ್ರಯತ್ನ ಶೀಘ್ರದಲ್ಲೇ ಫಲಪ್ರದವಾಗಲಿದೆ.
ಕಟರಾ ಮತ್ತು ಬನಿಹಾಲ್ ಸೆಕ್ಷನ್ನ ಬಹಳ ದುರ್ಗಮ ಸ್ಥಳದಲ್ಲಿ ನಿರ್ಮಾಣವಾಗಿರುವ ರೈಲು ಹಾದಿಯಲ್ಲಿ ಪ್ರಯೋಗ ಯಶಸ್ವಿಯಾಗಿದೆ. ಈ ಟ್ರಯಲ್ ರನ್ನಲ್ಲಿ ವಂದೇ ಭಾರತ್ ಟ್ರೈನ್ವೊಂದು 110 ಕಿಮೀ ವೇಗದಲ್ಲಿ ಸಾಗಿ ಹೋಗಿದೆ.
ಸಂಗಲದಾನ್ ಮತ್ತು ರಿಯಾಸಿ ನಡುವಿನ ರೈಲು ಹಾದಿಯಲ್ಲಿ ಪ್ರಯೋಗಗಳು ನಡೆಯುತ್ತಿವೆ. ಇದರ ಭಾಗವಾಗಿ ಕಟರ-ಬನಿಹಾಲ್ ಸೆಕ್ಷನ್ ಕೂಡ ಇದೆ. ಇಲ್ಲಿ ರೈಲು ಹಳಿ ನಿರ್ಮಿಸುವುದು ಬಹಳ ದೊಡ್ಡ ಸವಾಲಿನ ಕೆಲಸವಾಗಿತ್ತು. ಆಳದ ಮತ್ತು ಅಪಾಯಕಾರಿ ಕಣಿವೆಗಳಿರುವ ಈ ಜಾಗದಲ್ಲಿ ರೈಲ್ವೆ ಎಂಜಿನಿಯರುಗಳು ಬಲಿಷ್ಠ ಮೇಲ್ಸೇತುವೆಗಳನ್ನು ನಿರ್ಮಿಸಿದ್ದಾರೆ. ರೈಲ್ವೆ ಇಲಾಖೆಯ ನಾರ್ತರ್ನ್ ಸರ್ಕಲ್ನ ರೈಲ್ವೆ ಸುರಕ್ಷತಾ ಆಯುಕ್ತರಾದ ದಿನೇಶ್ ಚಂದ್ ದೇಶವಾಲ್ ಅವರು ರೈಲ್ವೆ ಎಂಜಿನಿಯರುಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ರೈಲ್ವೇಸ್ನ ಇತಿಹಾಸದಲ್ಲೇ ಇದೊಂದು ಹೊಸ ಅಧ್ಯಾಯ ಎಂದಿದ್ದಾರೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಪ್ರಶಂಸೆ
ಜಮ್ಮು ಕಾಶ್ಮೀರಕ್ಕೆ ಹೊಸ ರೈಲು ಹಾದಿ ನಿರ್ಮಾಣ ಮಾಡಿದ ಇಲಾಖೆಯ ಎಂಜಿನಿಯರುಗಳ ಕೌಶಲ್ಯವನ್ನು ಕೇಂದ್ರ ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಕೊಂಡಾಡಿದ್ದಾರೆ. ದುರ್ಗಮ ಕಣಿವೆಗಳಿರುವ ಈ ಪ್ರದೇಶದ ಭೌಗೋಳಿಕ ಮತ್ತು ಹವಾಮಾನ ಸವಾಲುಗಳ ನಡುವೆಯೂ ಈ ಯೋಜನೆ ಯಶಸ್ವಿಯಾಗಿರುವುದು ಎಂಜಿನಿಯರುಗಳ ಬದ್ಧತೆಯನ್ನು ತೋರಿಸುತ್ತದೆ ಎಂದಿರುವ ವೈಷ್ಣವ್, ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರ ಕಣಿವೆ ನಡುವೆ ಟ್ರೈನು ಸಂಚಾರ ಆರಂಭವಾಗಲಿದೆ ಎಂದಿದ್ದಾರೆ.
111 ಕಿಮೀ ರೈಲು ಹಾದಿ
ಜಮ್ಮು ಮತ್ತು ಕಾಶ್ಮೀರವು ಕಠಿಣ ಮತ್ತು ದುರ್ಗಮ ಕಣಿವೆಗಳಿಂದ ಕೂಡಿದೆ. ಇಲ್ಲಿ ಉಷ್ಣಾಂಶ ಮೈನಸ್ 20 ಡಿಗ್ರಿವರೆಗೂ ಹೋಗುತ್ತದೆ. ಇಲ್ಲಿ 111 ಕಿಮೀ ರೈಲು ಹಾದಿಯಲ್ಲಿ 97 ಕಿಮೀಯಷ್ಟು ಹಾದಿಯು ಸುರಂಗಗಳಲ್ಲೇ ಸಾಗಿ ಹೋಗುತ್ತದೆ. 6 ಕಿಮೀಯಷ್ಟು ಹಾದಿಯು ಮೇಲ್ಸೇತುವೆಗಳಲ್ಲಿ ಸಾಗುತ್ತದೆ. ಹೀಗಾಗಿ, ಈ ರೈಲ್ವೆ ಲೈನ್ನ ಪ್ರಾಜೆಕ್ಟ್ ಅನ್ನು ಮುಕ್ತಾಯಗೊಳಿಸಲು ಎರಡು ದಶಕಕ್ಕಿಂತ ಹೆಚ್ಚಿನ ಅವಧಿ ತೆಗೆದುಕೊಂಡಿದೆ.