ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ಈ ವರ್ಷದ ಮೊದಲ ಮಳೆ ಆಗಮನದ ಮುನ್ಸೂಚನೆ ಸಿಕ್ಕಿದ್ದು, ಹವಾಮಾನ ಶಾಸ್ತ್ರಜ್ಞರು ಹೇಳಿರುವ ಪ್ರಕಾರ, ಜನವರಿ ಎರಡನೇ ವಾರದಲ್ಲಿಯೇ ಕಾಣಲಿದೆ.
ದೀರ್ಘಕಾಲದ ಶೀತ ಮತ್ತು ಶುಷ್ಕ ಹವಾಮಾನದ ನಂತರ, ಬೆಂಗಳೂರು ಜನವರಿ 13 ಮತ್ತು 14ರಂದು ತನ್ನ ಈ ವರ್ಷದ ಮೊದಲ ಮಳೆಯನ್ನು ಅನುಭವಿಸಲು ಸಿದ್ಧವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ರೂಪುಗೊಳ್ಳುವುದರಿಂದ ನಗರದಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಧ್ಯಮ ಪ್ರಮಾಣದ ಮಂಜು ಕವಿಯಬಹುದು. ಬೆಳಗ್ಗೆ ಹಾಗೂ ಸಂಜೆಗಳು ಮಂಜಿನಿಂದ ಆವೃತವಾಗಬಹುದು. ಈ ಸಲದ ಚಳಿಗಾಲ ಕೂಡ ಹೆಚ್ಚು ಮಂಜಿನಿಂದ ಆವೃತವಾಗಿರುವ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಈ ವಾರದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಬಂಗಾಳಕೊಲ್ಲಿಯಿಂದ ಪೂರ್ವ ದಿಕ್ಕಿನ ಮಾರುತಗಳು ಹರಿದುಬರುತ್ತಿವೆ. ಕನಿಷ್ಠ ತಾಪಮಾನದಲ್ಲಿ ಇತ್ತೀಚಿನ ಏರಿಕೆಯ ಹೊರತಾಗಿಯೂ, ಜನವರಿ 14 ರ ನಂತರ ತಾಪಮಾನದಲ್ಲಿ ಕುಸಿತವನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಕೇಂದ್ರ ಹೇಳಿದೆ.
IMD ಡೇಟಾವು ಬೆಂಗಳೂರಿನಲ್ಲಿ ಜನವರಿಯ ಸರಾಸರಿ ದೈನಂದಿನ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15.8°C ಆಗಿದೆ ಎಂದು ಸೂಚಿಸಿದೆ. ಆದರೆ, ಶುಕ್ರವಾರ ನಗರದಲ್ಲಿ ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 16.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಎರಡು ವಾರಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಈ ವರ್ಷದ ಅತೀ ಕನಿಷ್ಠ ಅಂದರೆ 12°C ತಾಪಮಾನ ದಾಖಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎರಡು ದಿನಗಳ ಅವಧಿಯಲ್ಲಿ ಮಳೆ ಬೀಳುವ ನಿರೀಕ್ಷೆಯಿರುವ ಪೂರ್ವ ಮಾರುತಗಳು ಬಲಗೊಳ್ಳುವುದರಿಂದ ಮಂಜು ಕಡಿಮೆಯಾಗಬಹುದು ಎಂದು IMD ಅಧಿಕಾರಿಗಳು ಹೇಳುತ್ತಾರೆ.