ಇಂದಿನಿಂದ ಮಹಾಕುಂಭಮೇಳಕ್ಕೆ ಚಾಲನೆ: 2,700 ಎಐ ಕ್ಯಾಮೆರಾ ಕಣ್ಗಾವಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದಿನಿಂದ 44 ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ದೊರತಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆಯಾಗಿ ಭಿಗಿ ಭದ್ರತೆ ನಿಯೋಜಿಸಲಾಗಿದೆ.

10,000 ಹೆಕ್ಟೇರ್‌ಗಳ ವಿಶಾಲ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಮಹಾ ಕುಂಭಮೇಳದ ಯಶಸ್ಸಿಗಾಗಿ ಉತ್ತರ ಪ್ರದೇಶದ ಸರ್ಕಾರ ಈಗಾಗಲೇ 9,000 ಕೋಟಿ ರೂ. ಅನುದಾನ ನೀಡಿದೆ. ಕೋಟ್ಯಂತರ ಭಕ್ತರಿಗಾಗಿ ವಿಶಾಲವಾದ ಪ್ರದೇಶದಲ್ಲಿ 1.5 ಲಕ್ಷ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತಾಧಿಗಳ ಸಂಚಾರಕ್ಕಾಗಿ 30 ಕಿರು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. 400 ಕಿಮೀಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ರಚಿಸಲಾಗಿದೆ. 69,000 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭಕ್ತರಿಗೆ ರಾತ್ರಿ ವೇಳೆಯೂ ಸೂಕ್ತವಾದ ರಕ್ಷಣೆ ಇರಲಿದೆ.

ಮಹಾಕುಂಭ ಮೇಳಕ್ಕೆ ಹೈ ಸೆಕ್ಯೂರಿಟಿ ನಿಯೋಜಸಿದ್ದು, ಎಲ್ಲೆಲ್ಲೂ ಹದ್ದಿನ ಕಣ್ಣು ಇರಿಸಲಾಗಿದೆ. ಎನ್‌ಎಸ್‌ಜಿ, ಯುಪಿ ಪೊಲೀಸ್, ಯುಪಿ ಎಟಿಎಸ್ ಮತ್ತು ಪಿಎಸಿಗಳಿಂದ ಭದ್ರತೆ ಒದಗಿಸಲಾಗಿದೆ. ಗಾಳಿ, ನೆಲ ಅಥವಾ ನೀರಿನ ಮೂಲಕ ಯಾವುದೇ ದಾಳಿಗಳು ನಡೆದರೂ ಪ್ರತಿರೋಧಕ್ಕೆ ಸಿದ್ಧವಾಗಿದ್ದು, ದೇವಸ್ಥಾನ ಹಾಗೂ ನಾಗ ಸಾಧುಗಳ ಅಖಾಡಗಳಿಗೆ ಚಕ್ರವ್ಯೂಹದ ಭದ್ರತೆ ಒದಗಿಸಲಾಗಿದೆ.

ಏಳು ನಿರ್ಣಾಯಕ ಮಾರ್ಗಗಳಲ್ಲಿ 102 ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ, ಬಸ್ ನಿಲ್ದಾಣಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಮಹಾಕುಂಭ ನಡೆಯುವ ಪ್ರದೇಶದಲ್ಲಿ ದೇವಸ್ಥಾನಗಳು, ನಾಗಸಾಧುಗಳ ಅಖಾಡಗಳಿಗೆ ಚಕ್ರವ್ಯೂಹ ಎಂದು ಕರೆಯಲ್ಪಡುವ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 37,000 ಪೋಲಿಸರನ್ನು ಹಾಗೂ 14,000 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸರ ಜೊತೆಗೆ ರಾಜ್ಯ ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಇಂದ ಭದ್ರತೆ ಒದಗಿಸಲಾಗಿದೆ. ಪೊಲೀಸರು ನೀರೊಳಗಿನ ಡ್ರೋನ್‌ಗಳು ಮತ್ತು ಎಐ-ಸಕ್ರಿಯಗೊಳಿಸಿದ ಕ್ಯಾಮೆರಾಗಳು ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಸಹ ಬಳಸುತ್ತಿದ್ದಾರೆ. ಕುಂಭ ಪ್ರದೇಶದ ಸುತ್ತಲೂ ಒಟ್ಟು 2,700 ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ.

113 ನೀರೊಳಗಿನ ಡ್ರೋನ್‌ಗಳು ಜಲಮಾರ್ಗಗಳನ್ನು ಮೇಲ್ವಿಚಾರಣೆ ಮಾಡುತ್ತವೆ. ಈ ಡ್ರೋನ್‌ಗಳಿಗೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಹೊಂದಿರುವ ರಿಸ್ಟ್ ಬ್ಯಾಂಡ್‌ಗಳನ್ನು ಒದಗಿಸಲಾಗಿದೆ. ಇದರ ಸಹಾಯದಿಂದ ಮೇಳದಲ್ಲಿ ಯಾರಾದರೂ ಕಳೆದು ಹೋದಲ್ಲಿ ಅವರನ್ನು ಈ ತಂತ್ರಜ್ಞಾನದ ಮೂಲಕ ಟ್ರ‍್ಯಾಕ್ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!