ಕೆಚ್ಚಲು ಕೊಯ್ದ ಪ್ರಕರಣ: ಮಾಲೀಕರಿಗೆ ಮೂರು ಹಸು ಉಡುಗೊರೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಹಸುವಿನ ಮಾಲೀಕ ಕರ್ಣ ಅವರ ತಿರಸ್ಕಾರದ ನಡುವೆಯೂ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾನುವಾರುಗಳ ಮಾಲೀಕರಿಗೆ ಬುಧವಾರ ಮೂರು ಹಸುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಚಾಮರಾಜಪೇಟೆಯ ವಿನಾಯಕನಗರ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಮೂರು ಹಸುಗಳ ಕೆಚ್ಚಲು ಕತ್ತರಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 325 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಹಾರದ ಚಂಪಾರಣ್ ಮೂಲದ ಶೇಖ್ ನಸ್ರು (30) ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ. ಈ ನಡುವೆ ಘಟನೆ ನಡೆದ ಸ್ಥಳಕ್ಕೆ ಸಚಿವ ಜಮೀರ್ ಅಹಮದ್ ಭೇಟಿ ನೀಡಿ, ಮೂರು ಹಸುಗಳನ್ನು ಕೊಡಿಸುವುದಾಗಿ ಮಾಲೀಕರಿಗೆ ಮಾತು ಕೊಟ್ಟಿದ್ದರು. ಅದರಂತೆ ಹಸುಗಳ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ 3 ಲಕ್ಷ ರೂ. ವೆಚ್ಚದ ಹಸುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಷ್, ಗೌಸಿ, ವಿನಾಯಕ್, ಪ್ರಸಾದ್ ಇದ್ದರು.

ಹಸುಗಳ ಮಾಲೀಕ ಕರ್ಣ ಮಾತನಾಡಿ, ‘ನನಗೆ ತೀವ್ರ ಬೇಸರವಾಗಿದೆ, ರಾತ್ರಿ ನಮ್ಮ ಮನೆ ಬಳಿಯಲ್ಲಿ ಹಸುಗಳನ್ನು ಕಟ್ಟಿ ಹಾಕಲಾಗಿತ್ತು. ಬೆಳಗ್ಗೆ ಈ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ನಾವು ದೂರು ದಾಖಲಿಸಿದ್ದೇವೆ. ನನಗೆ ನ್ಯಾಯ ಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!