ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಕೇಡರ್ನ ವಜಾಗೊಂಡ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೊರಡಿಸಿದ ಮಧ್ಯಂತರ ಆದೇಶದಲ್ಲಿ ನಿರ್ದೇಶಿಸಿದೆ.
ನಕಲಿ ಒಬಿಸಿ ಮತ್ತು ಪಿಡಬ್ಲ್ಯೂಬಿಡಿ (ವಿಕಲಚೇತನ ವ್ಯಕ್ತಿಗಳು) ಪ್ರಮಾಣಪತ್ರಗಳನ್ನು ಸಲ್ಲಿಸಿದ ಮತ್ತು ತನ್ನ ಗುರುತನ್ನು ನಕಲಿ ಮಾಡುವ ಮೂಲಕ ನಾಗರಿಕ ಸೇವೆಗಳ ಪರೀಕ್ಷೆಗೆ (ಸಿಎಸ್ಇ) ಹಾಜರಾಗಬಹುದಾದ ಗರಿಷ್ಠ ಮಿತಿಗಿಂತಲೂ ಹೆಚ್ಚು ಬಾರಿ ಪರೀಕ್ಷೆಗೆ ಹಾಜರಾದ ಆರೋಪದ ಮೇಲೆ ಖೇಡ್ಕರ್ ವಿರುದ್ಧ ವಿಚಾರಣೆ ನಡೆಯುತ್ತಿದೆ.
ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎಸ್.ಸಿ.ಶರ್ಮಾ ಅವರ ನ್ಯಾಯಪೀಠ, ಫೆಬ್ರವರಿ 14 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರು ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ಸಿ) ಸೂಚಿಸಿದೆ. ಪೂಜಾ ಖೇಡ್ಕರ್ ಗೆ ಬಂಧನದಿಂದ ರಕ್ಷಣೆ ನೀಡಿತು.
ಈ ಹಿಂದೆ, ದೆಹಲಿ ಹೈಕೋರ್ಟ್ ಖೇಡ್ಕರ್ ಅವರ ಬಂಧನ ಪೂರ್ವ ಜಾಮೀನು ಅರ್ಜಿ ವಜಾಗೊಳಿಸಿತ್ತು ಮತ್ತು ಬಂಧನದಿಂದ ರಕ್ಷಿಸುವ ತನ್ನ ಹಿಂದಿನ ಆದೇಶವನ್ನು ಹಿಂತೆಗೆದುಕೊಂಡಿತ್ತು.
ಡಿಸೆಂಬರ್ 15, 2024 ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರ ನ್ಯಾಯಪೀಠವು ಖೇಡ್ಕರ್ ವಿರುದ್ಧ ಮೇಲ್ನೋಟಕ್ಕೆ ಬಲವಾದ ಪ್ರಕರಣ ದಾಖಲಾಗಿದ್ದು, ಇಂಥ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಯ ಕಸ್ಟಡಿ ವಿಚಾರಣೆ ಅಗತ್ಯವಿದೆ ಎಂದು ಹೇಳಿತ್ತು.
ನ್ಯಾಯಮೂರ್ತಿ ಸಿಂಗ್ ನೇತೃತ್ವದ ನ್ಯಾಯಪೀಠವು ನವೆಂಬರ್ 28, 2024 ರಂದು ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಖೇಡ್ಕರ್ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ತೀರ್ಪು ನೀಡುವವರೆಗೆ, ಖೇಡ್ಕರ್ ಅವರನ್ನು ಬಂಧಿಸದಂತೆ ಆಗಸ್ಟ್ 12 ರಂದು ನೀಡಲಾದ ಮಧ್ಯಂತರ ಪರಿಹಾರ ಮುಂದುವರಿಯಲಿದೆ ಎಂದು ನಂತರ ಸ್ಪಷ್ಟಪಡಿಸಿತ್ತು.