ಹೊಸದಿಗಂತ ವರದಿ ಹುಬ್ಬಳ್ಳಿ:
ಮುಡಾ ಹಗರಣದಲ್ಲಿ 300 ಕೋಟಿ ಆಸ್ತಿ ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ( ಇಡಿ) ಪತ್ರಿಕಾ ಪ್ರಕಟಣೆ ನೀಡಿರುವುದು ರಾಜಕೀಯ ದುರುದ್ದೇಶದ ಹೆಜ್ಜೆಯಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಆಯೋಜಿಸಿರುವ ಗಾಂಧಿ ಭಾರತ ಕಾರ್ಯಕ್ರಮವನ್ನು ಹಾಳು ಗೆಡವಲು ಈ ರೀತಿ ಮಾಡಲಾಗಿದೆ. ಪತ್ರಿಕಾ ಪ್ರಕಟಣೆ ಕೊಡಲು ಇಡಿಗೆ ಯಾರು ಹೇಳಿದ್ದಾರೆ. ನಿಮ್ಮ ಕೆಲಸವನ್ನು ನೀವು ಮಾಡಬೇಕು. ತನಿಖೆ ಮಾಡಿ ಕೋರ್ಟ್ ಗೆ ಚಾರ್ಜ್ ಶೀಟ್ ಹಾಕಲಿ. ಅದು ಬಿಟ್ಟು ಪತ್ರಿಕಾ ಪ್ರಕರಣೆ ಕೊಟ್ಟಿರುವುದು ಸರಿಯಲ್ಲ ಎಂದರು.
ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ವನ್ಯಜೀವಿ ಮಂಡಳಿ ಮುಂದಿನ ಎರಡು ತಿಂಗಳ ಒಳಗಾಗಿ ಅನುಮತಿ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಈ ಹಿಂದೆ ನಡೆದ ಸಂಸತ್ ಅಧಿವೇಶನದಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ಸಿಗಬಹುದೆಂಬ ಆಶಾಭಾವಬನೆ ಇತ್ತು. ಆದರೆ ಕೇಂದ್ರ ಸರ್ಕಾರ ನಿರಾಶೆ ಮಾಡಿದೆ. ಅದೇ ಚುನಾವಣೆಗಳು ಬಂದಾಗ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಮಾತನಾಡುತ್ತಾರೆ. ಅದೇ ಮಹದಾಯಿ ವಿಚಾರ ಬಂದಾಗ ಸಭೆ ಮುಂದಕ್ಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.