ಹೊಸದಿಗಂತ ವರದಿ ಹುಬ್ಬಳ್ಳಿ:
ಬೀದರ್ ಹಾಗೂ ದಕ್ಷಿಣ ಕನ್ನಡದ ಉಲ್ಲಾಳದಲ್ಲಿ ಬ್ಯಾಂಕ್ ಗಳ ದರೋಡೆ ಪ್ರಕರಣಗಳು ನಡೆದಿದ್ದು, ಹು-ಧಾ ಅವಳಿನಗರದಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಬ್ಯಾಂಕ್, ಆಭರಣ, ಫೈನಾನ್ಸ್ ಮಾಲೀಕರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇನ್ನೂ ನಗರದ ಹೊರವಲಯದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆ ದರೋಡೆ ಪ್ರಕರಣಗಳು ನಡೆದಿವೆ. ಆದರೆ ಬ್ಯಾಂಕ್ ದರೋಡೆ ಪ್ರಕರಣ ನಡೆದಿಲ್ಲ. ಕಳೆದ 10 ವರ್ಷದಲ್ಲಿ ಹೊರಗಿನಿಂದ ಬಂದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಚಟುವಟಿಕೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಆರ್ ಬಿ ಐ ನಿಯಮಗಳನ್ನು ಅನುಸರಿಸಲು ತಿಳಿಸಿದ್ದೇವೆ. ಆದರೆ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯ ಮಾಡುವುದರಿಂದ ಇಂತಹ ಕೃತ್ಯಗಳು ಜರಗುತ್ತವೆ.
ಭದ್ರತೆ ವಿಚಾರಕ್ಕೆ ಸಂಬಂಧಿಸಿ ಹಲವು ಕಾರಣಗಳನ್ನು ನೀಡುತ್ತಾರೆ. ಠಾಣಾ ವ್ಯಾಪ್ತಿಯಲ್ಲಿ ಬ್ಯಾಂಕ್, ಫೈನಾನ್ಸ್ ಸಿಬ್ಬಂದಿ ಯೊಂದಿಗೆ ಸೂಕ್ತ ಭದ್ರತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಜ. ೨೦ ರಂದು ನಗರದ ಬಿವಿಬಿ ಕಾಲೇಜ್ ಬಿಟಿ ಹಾಲ್ ನಲ್ಲಿ ಬ್ಯಾಂಕ್ ಹಾಗೂ ಎಲ್ಲ ಫೈನಾನ್ಸ್ ಸಿಬ್ಬಂದಿಯೊಂದಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.