ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಅವರ ಬೆಂಗಾವಲು ವಾಹನದ ಮೇಲೆ ಬಿಜೆಪಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಆರೋಪಿಸಿದೆ.
ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಮಾಜಿ ಸಂಸದ ಪರ್ವೇಶ್ ವರ್ಮಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಬೆಂಬಲಿಗರೇ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದಾಳಿಯ ನಂತರ ಎಎಪಿ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ ಪೋಸ್ಟ್ ಮೂಲಕ ಬಿಜೆಪಿ ವಿರುದ್ಧ ಆರೋಪ ಮಾಡಿದೆ. ಬಿಜೆಪಿಯ ಸೋಲಿನ ಭಯದಿಂದದ ಈ ದಾಳಿ ನಡೆದಿದೆ ಎಂದು ಅದು ಹೇಳಿದೆ. ಸೋಲಿನ ಭಯದಿಂದ ಗಾಬರಿಗೊಂಡ ಬಿಜೆಪಿ, ಅರವಿಂದ್ ಕೇಜ್ರಿವಾಲ್ ಮೇಲೆ ಗೂಂಡಾಗಳ ದಾಳಿಗೆ ಮುಂದಾದರು. ಬಿಜೆಪಿ ಅಭ್ಯರ್ಥಿ ಪ್ರವೇಶ ವರ್ಮಾ ಅವರ ಗೂಂಡಾಗಳು ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಪ್ರಚಾರ ಮಾಡದಂತೆ ಗಾಯಗೊಳಿಸಿದ್ದಾರೆ ಎಂದು ಪಕ್ಷ ಹೇಳಿದೆ.
ನಾವು ದಾಳಿ ಮಾಡಿಲ್ಲ
ಇತ್ತ ಆಮ್ ಆದ್ಮಿ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ನಾವು ದಾಳಿ ಮಾಡಿಲ್ಲ, ಅವರಿಂದಲೇ ಹಾನಿ ಆಗಿದೆ. ಅರವಿಂದ್ ಕೇಜ್ರಿವಾಲ್ ಅವರ ಕಾರು ಬಿಜೆಪಿಯ ಕಾರ್ಯಕರ್ತಗೆ ಗುದ್ದಿ ಮುಂದೆ ಹೋಗಿದೆ, ಕಾರ್ಯಕರ್ತನ (ಬಿಜೆಪಿ) ಕಾಲು ಮುರಿದಿದೆ, ನಾನು ಅವರ ಆರೋಗ್ಯ ವಿಚಾರಿಸಲು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.