ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೀದರ್‌ನಲ್ಲಿ ಹಾಡಹಗಲೇ ದರೋಡೆಕೋರರು ಎಟಿಎಂ ಸಿಬ್ಬಂದಿಗೆ ಶೂಟ್ ಮಾಡಿ ದುಡ್ಡಿನ ಸಮೇತ ಪರಾರಿಯಾಗಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈ ದರೋಡೆಕೋರರ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಹಲವು ನಗರಗಳು, ನೂರಾರು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿರುವ ಪೊಲೀಸರು ಕೊನೆಗೂ ಇದು ಯಾರ ಕೈವಾಡ ಅನ್ನೋದನ್ನು ಪತ್ತೆ ಹಚ್ಚಿದ್ದಾರೆ.
ಬೀದರ್ ದರೋಡೆ ಪ್ರಕರಣದಲ್ಲಿ ಬಿಹಾರಿ ಗ್ಯಾಂಗ್‌ನ ಕೈಚಳಕ ಇರೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಅಷ್ಟೇ ಅಲ್ಲ ದರೋಡೆ ಮಾಡಿದವರ ಸುಳಿವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ದರೋಡೆ ಮಾಡಿ ಹೋದ ಇಬ್ಬರು ಆರೋಪಿಗಳ ಪೈಕಿ ಓರ್ವನ ಹೆಸರು, ವಿಳಾಸ ಪತ್ತೆಯಾಗಿದೆ. ಬಿಹಾರ ಮೂಲದ ಅಮಿತ್ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಬಿಹಾರದ ಮನೀಶ್ ಶೂಟ್ ಮಾಡಿ ದರೋಡೆ ಮಾಡಿರೋದು ತನಿಖೆಯಲ್ಲಿ ಪತ್ತೆಯಾಗಿದೆ.
ಬೀದರ್‌ನಿಂದ ಬೈಕ್‌ನಲ್ಲಿ ಹೋದ ಮನೀಶ್ ಹಾಗೂ ಆತನ ಸಹಚರ ಹೈದರಾಬಾದ್ ಸಮೀಪದ ಅಫ್ಜಲಗಂಜ್‌ನಲ್ಲಿ ಫೈರಿಂಗ್ ಮಾಡಿದ್ದಾರೆ. ಅಫ್ಜಲಗಂಜ್ ಟ್ರಾವೆಲ್ಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಬಿಹಾರಿ ಗ್ಯಾಂಗ್ ಆಟೋದಲ್ಲಿ ನಾಪತ್ತೆಯಾಗಿದ್ದಾರೆ.
ಹೈದರಾಬಾದ್‌ನಿಂದ ಹೋಗಿದ್ದು ಎಲ್ಲಿಗೆ?
ಬೀದರ್‌ನಲ್ಲಿ 93 ಲಕ್ಷ ರೂಪಾಯಿ ಹಣ ದರೋಡೆ ಮಾಡಿದ ಇಬ್ಬರು ಹೇಗೋ ಮಾಡಿ ಕರ್ನಾಟಕದ ಗಡಿ ದಾಟಿದ್ದಾರೆ. ಹೈದರಾಬಾದ್ ಕಡೆ ಪ್ರಯಾಣ ಬೆಳೆಸಿದವರಿಗೆ ಅಫ್ಜಲಗಂಜ್ ಟ್ರಾವೆಲ್ಸ್ ಸಿಬ್ಬಂದಿಯಿಂದ ಅಡಚಣೆ ಆಗಿದೆ. ಅನುಮಾನಗೊಂಡ ಬ್ಯಾಗ್ ಅನ್ನು ಚೆಕ್ ಮಾಡಲು ಟ್ರಾವೆಲ್ಸ್ ಸಿಬ್ಬಂದಿ ಕೇಳಿದ್ದಾರೆ. ಆಗ ದರೋಡೆಕೋರರು ಅಲ್ಲೂ ಫೈರ್ ಮಾಡಿದ್ದಾರೆ.
ಅಫ್ಜಲ್‌ಗಂಜ್‌ನಿಂದ ಕಾಲ್ಕಿತ್ತ ದರೋಡೆಕೋರರು ಸಿಕಂದರಾಬಾದ್ ಆಟೋನಲ್ಲಿ ಹೋಗಿ ಬ್ಯಾಗ್ ಮತ್ತು ಬಟ್ಟೆಯನ್ನು ಬದಲಿಸಿದ್ದಾರೆ. ಆಗಂತುಕರು ಸಿಕಂದರಾಬಾದ್ನಿಂದ ರೈಲಿನಲ್ಲಿ ಉತ್ತರ ಭಾರತಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಬೀದರ್ ದರೋಡೆಯಲ್ಲಿ ಬಿಹಾರದ ಮನೀಶ್ ಸುಳಿವು ಸಿಕ್ಕಿದ್ರೆ ಮತ್ತೊಬ್ಬ ಆರೋಪಿ ಹೆಸರು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಇತ್ತಿಚೇಗೆ ಬಿಹಾರದ ಇದೇ ಗ್ಯಾಂಗ್ ಛತ್ತೀಸ್‌ಘಡದಲ್ಲಿ 70 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಛತ್ತಿಸ್‌ಘಡದ ಪ್ರಕರಣಕ್ಕೂ ಬೀದರ್ ಪ್ರಕರಣಕ್ಕೂ ಸಾಮ್ಯತೆ ಇದ್ದು, ಅಮಿತ್ ಗ್ಯಾಂಗ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.