ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಭಾನುವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಹೋರಾಟ ನಡೆಸಿ ಶಿಕ್ಷೆ ಕೊಡಿಸಬೇಕಾಗಿದ್ದ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರು, ಮಗನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿ ಭವ್ಯ ಅವರನ್ನು ರಕ್ಷಣೆ ಮಾಡಲು ಸಹಕರಿಸಿ, ಸೊಸೆ ಮತ್ತು ಮೊಮ್ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ಈ ಮೂಲಕ ಸುಳ್ಳು ಡೆತ್ ನೋಟ್ ಸೃಷ್ಟಿಸಿಕೊಂಡು ಮಗನ ಆಸ್ತಿ ಕಬಳಿಸಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೃತ ಪ್ರದೀಪ್ ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಮಗನಾಗಿದ್ದು, ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೂ ಸಹ ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಉಪ ಪೊಲೀಸ್ ನಿರೀಕ್ಷಕಿಯಾಗಿದ್ದ ಭವ್ಯ ಅವರು ಆತನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದುದ್ದಲ್ಲದೇ, ಎರಡನೇ ಮದುವೆಯಾಗಲು ಒಪ್ಪಿಗೆ ನೀಡುವಂತೆ ಪ್ರತೀಪ್‌ನ ಮನೆಯವರಿಗೆ ಅದರಲ್ಲೂ ಪ್ರತೀಪ್‌ನ ಪತ್ನಿ ನೇಹಾ ಅವರಿಗೆ ಒತ್ತಡ ಹಾಕಿದ್ದರು. ಆ ವೇಳೆ ಅವರು ಒಪ್ಪದ ಕಾರಣ, ಭವ್ಯ ಅವರು ಮದುವೆಯಾಗಲು ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಹೀಗಾಗಿ ಮಾನಸಿಕ ಒತ್ತಡಕ್ಕೆ ಒಳಗಾದ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.