ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಮಗ ತಾಯಿಯೊಂದಿಗೆ ಇರುತ್ತಾನೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಡಿಸೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಮಗ ನಾಲ್ಕು ವರ್ಷದ ಬಾಲಕನ ಪಾಲನೆಯ ಜವಾಬ್ದಾರಿಯನ್ನು ಆತನ ಪತ್ನಿ ನಿಕಿತಾ ಸಿಂಘಾನಿಯಾ ವಹಿಸಿಕೊಳ್ಳಲಿ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ.
ಪುತ್ರನನ್ನು ತಮ್ಮ ಸುಪರ್ದಿಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಎಸ್.ಸಿ. ಶರ್ಮಾ ಅವರು ವೀಡಿಯೊ ಲಿಂಕ್ ಮೂಲಕ ಮಗುವಿನೊಂದಿಗೆ ಮಾತನಾಡಿದ ಬಳಿಕ ತೀರ್ಪು ನೀಡಿದ್ದಾರೆ.
ವಿಚಾರಣೆ ಆರಂಭವಾಗುತ್ತಿದ್ದಂತೆ, ಅರ್ಜಿದಾರರು ಹೆಚ್ಚು ವಿವರವಾದ ಅಫಿಡವಿಟ್ ಸಲ್ಲಿಸಲು ಒಂದು ವಾರದ ಸಮಯಾವಕಾಶ ಕೋರಿದರು. ಆದರೆ ನ್ಯಾಯಮೂರ್ತಿ ನಾಗರತ್ನ ಅವರು, ಅಂತಹ ಯಾವುದೇ ವಿನಂತಿ ನೀಡಲ್ಲ ಎಂದು ವಜಾಗೊಳಿಸಿದರು.
ಇದು ಹೇಬಿಯಸ್ ಕಾರ್ಪಸ್ (ಅರ್ಜಿ). ನಾವು ಮಗುವನ್ನು ನೋಡಲು ಬಯಸುತ್ತೇವೆ. ಮಗುವನ್ನು ಹಾಜರುಪಡಿಸಿ. ಸ್ವಲ್ಪ ಸಮಯದ ನಂತರ ನ್ಯಾಯಾಲಯವು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಿದ್ದರು.
ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಕುಟುಂಬ ಸದಸ್ಯರಾದ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಅವರು 34 ವರ್ಷದ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇಬ್ಬರನ್ನೂ ಬಂಧಿಸಿ ನಂತರ ಜಾಮೀನು ನೀಡಿತ್ತು.