ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಎತ್ತರದ ಪರ್ವತಗಳಲ್ಲಿ ಒಂದಾದ ಮೌಂಟ್ ಎವರೆಸ್ಟ್ ಏರುವ ಶುಲ್ಕವನ್ನು ನೇಪಾಳ ಸರ್ಕಾರ ಶೇ.36ರಷ್ಟು ಏರಿಕೆ ಮಾಡಿದೆ.
ಅರ್ಥಾತ್ ಈವರೆಗೆ 9 ಲಕ್ಷ ರು. ಇದ್ದ ಶುಲ್ಕ 13 ಲಕ್ಷ ರು.ಗೆ ಏರಿಕೆ ಆಗಿದೆ. ಪರ್ವತ ಏರುವ ಅನುಮತಿ ಶುಲ್ಕ ಹಾಗೂ ವಿದೇಶಿ ಪರ್ವತಾರೋಹಿಗಳು ಮಾಡುವ ಖರ್ಚೇ ನೇಪಾಳದ ಮೂಲ ಆದಾಯವಾಗಿದೆ. ಹೀಗಾಗಿ ಸುಮಾರು ದಶಕದ ಬಳಿಕ ಎವರೆಸ್ಟ್ ಏರುವ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ, 8,849 ಮೀ. ಮೌಂಟ್ ಎವರೆಸ್ಟ್ ಏರಲು 13 ಲಕ್ಷ ರು. ಶುಲ್ಕ ವಿಧಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ನಾರಾಯಣ್ ಪ್ರಸಾದ್ ರೆಗ್ಮಿ ತಿಳಿಸಿದ್ದಾರೆ. ಈ ಮೊದಲು ಇದು 9 ಲಕ್ಷ ರು. ಇತ್ತು. ಸಾಮಾನ್ಯವಾರಿ ಏಪ್ರಿಲ್‌ನಿಂದ ಮೇ ವರೆಗೆ ಅನೇಕರು ಪರ್ವತಾರೋಹಣ ಕೈಗೊಳ್ಳುತ್ತಾರೆ.
ಈ ಅವಧಿಗೆ ಶುಲ್ಕ ಅನ್ವಯವಾಗಲಿದೆ. ಹೊಸ ದರವು ಸೆಪ್ಟೆಂಬರ್‌ನಿಂದ ಜಾರಿಗೆ ಬರಲಿದೆ. ಅಂತೆಯೇ, ಕಡಿಮೆ ಪರ್ವತಾರೋಹಿಗಳು ಬರುವ ಸೆಪ್ಟೆಂಬರ್- ನವೆಂಬರ್, ಡಿಸೆಂಬರ್-ಫೆಬ್ರವರಿ ಅವಧಿಯಲ್ಲಿ ವಿಧಿಸಲಾಗುವ ಶುಲ್ಕವನ್ನೂ ಶೇ.36ರಷ್ಟು ಏರಿಸಿ, 6 ಲಕ್ಷ ರು. ಹಾಗೂ 3 ಲಕ್ಷ ರು. ಮಾಡಲಾಗಿದೆ.