ಗಣರಾಜ್ಯೋತ್ಸವ ಪರೇಡ್ 2025: ಪಥಸಂಚಲನಕ್ಕೆ ‘ಲಕ್ಕುಂಡಿ ಶಿಲ್ಪಕಲೆ’ ರೆಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ಲಕ್ಕುಂಡಿ ಶಿಲ್ಪಕಲೆ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಈ ಶಿಲ್ಪಕಲೆ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ (ರಾಜ್‌ಪಥ್‌) ಇದೇ 26ರಂದು ಸಾಗುವುದರೊಂದಿಗೆ ಕರ್ನಾಟಕ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿಪಾದಿಸಲಿದೆ,

ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿ ವರ್ಷ ತನ್ನ ವಿಶಿಷ್ಟ ಸ್ತಬ್ಧಚಿತ್ರಗಳ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಈ ಬಾರಿ ಲಕ್ಕುಂಡಿಯ ಶಿಲ್ಪಕಲೆಯಿಂದ ಕೂಡಿರುವ ಐತಿಹಾಸಿಕ ದೇವಾಲಯಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಲು ಹೊರಟಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಮೈಸೂರು, ಬೆಂಗಳೂರು, ಗದಗ ಮತ್ತು ಧಾರವಾಡದ 18 ಕಲಾವಿದರ ತಂಡವನ್ನು ಜಗ್ಗಲಿಗೆ ಕಲಾವಿದ ಲಿಂಗಯ್ಯ ಮುನ್ನಡೆಸುತ್ತಾರೆ. ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ತಲಾ ನಾಲ್ವರು ಮಹಿಳೆಯರು ಮತ್ತು ಪುರುಷರು ಜಗ್ಗಲಿಗೆ ಬಾರಿಸುತ್ತಾ ಮುನ್ನಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, 10 ರಿಂದ 12 ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ.

ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ.

ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ ಎಂದು ಅವರು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!