ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಕೆಎಸ್ ಆರ್ ಟಿಸಿ ಬಳಿಯ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಆರೋಪಿಸಿದ್ದಾರೆ.
ಇಂದು ಮಧ್ಯಾಹ್ನ ಬಿಜೈ ಕೆಎಸ್ ಆರ್ ಟಿಸಿ ಬಳಿಯಿರುವ ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ರಾಮ ಸೇನೆ ಕಾರ್ಯಕರ್ತರು ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು, ಪೀಠೋಪಕರಣ ಮತ್ತು ಕಂಪ್ಯೂಟರ್ ಗಳನ್ನು ಧ್ವಂಸಗೊಳಿಸಿದ್ದು, ಅಲ್ಲಿದ್ದ ಕೆಲವು ಹುಡುಗಿಯರಿಗೆ ನೀವು ವೈಶಾವಾಟಿಕೆ ದಂಧೆ ನಡೆಸುತ್ತಿದ್ದೀರಿ ಎಂದು ಆವಾಜ್ ಹಾಕಿದ್ದಾರೆ. ಈ ವೇಳೆ ಹುಡುಗಿಯರು ಕೈಮುಗಿದು ನಮ್ಮ ಮೇಲೆ ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುವ ವಿಡಿಯೋ ವೈರಲ್ ಆಗಿದೆ.
ರಾಮ ಸೇನೆ ಕಾರ್ಯಕರ್ತರೇ ತಾವು ದಾಳಿ ನಡೆಸಿದ ಕೃತ್ಯವನ್ನು ವಿಡಿಯೋ ಮಾಡಿ, ಬಿಡುಗಡೆ ಮಾಡಿದ್ದಾರೆ. ಅಲ್ಲದೆ . ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್ಗಳನ್ನು ಮುಚ್ಚುವಂತೆ ರಾಮ ಸೇನಾ ಆಗ್ರಹಿಸಿದ್ದಾರೆ.
‘ಮಸಾಜ್ ಸೆಂಟರ್ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದು ಪ್ರಸಾದ್ ಅತ್ತಾವರ ಹೇಳಿದ್ದಾರೆ.