ಇನ್ಮುಂದೆ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಅವಕಾಶ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೃಷಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದ್ದು, ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿರುವ ಮೂರು ದಿನಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ-2025 ಉದ್ಘಾಟಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಆಹಾರದ ಕೊರತೆಯಿತ್ತು. ಆದರೆ, ಈಗ ಹಲವಾರು ಆಹಾರಧಾನ್ಯಗಳನ್ನು ಭಾರತ ರಫ್ತು ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿರಳ ಮಳೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸಾವಯವ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಕೃಷಿ ಕುಟುಂಬವಾದ ನಮ್ಮ ಮನೆಯಲ್ಲೂ ಸಿರಿಧಾನ್ಯ ಬೆಳೆ ಬೆಳೆಯುತ್ತಿದ್ದೆವು, ರಾಗಿ ತಿಂದವನು ನಿರೋಗಿ ಎಂಬಂತೆ, ಸಿರಿಧಾನ್ಯಗಳ ಸೇವೆನೆ ಆರೋಗ್ಯಕ್ಕೆ ಉತ್ತಮವಾಗಿದೆ.

ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದೆ. ಸಾವಯವ ಕೃಷಿ ವಿಸ್ತೀರ್ಣದಲ್ಲಿ ಭಾರತವು ವಿಶ್ವದಲ್ಲಿ 2ನೇ ಸ್ಥಾನ ಹಾಗೂ ಒಟ್ಟು ಸಾವಯವ ಉತ್ಪಾದಕರಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅಂದಾಜು 903.61 ಲಕ್ಷ ಟನ್‌ಗಳಷ್ಟು ಸಿರಿಧಾನ್ಯಗಳ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಶೇ.38.50 ರಷ್ಟು ಪಾಲು ನಮ್ಮ ಭಾರತ ದೇಶದ್ದಾಗಿದ್ದು, ವಿಶ್ವದ ಸಿರಿಧಾನ್ಯ ಉತ್ಪಾದನೆಯಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿದೆ. ನಮ್ಮ ರಾಜ್ಯವು ಸಿರಿಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!