ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿರುವ ನಿಗೂಢ ಕಾಯಿಲೆಯೊಂದು ಸರ್ಕಾರ ಹಾಗೂ ಜನರ ನಿದ್ದೆಗೆಡುವಂತೆ ಮಾಡಿದೆ.
ರಜೌರಿ ಜಿಲ್ಲೆಯ ಬಾಧಲ್ ಗ್ರಾಮದ ಸುಮಾರು 400-500 ನಿವಾಸಿಗಳನ್ನು ಕ್ವಾರಂಟೈನ್‌ಗಾಗಿ ಸರ್ಕಾರಿ ವಸತಿಗೃಹಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಗ್ರಾಮದಲ್ಲಿ ಎರಡು ದಿನಗಳಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗ್ರಾಮವನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ.
ಗ್ರಾಮವನ್ನು ಮೂರು ಕಂಟೈನ್‌ಮೆಂಟ್ ವಲಯಗಳಾಗಿ ವಿಂಗಡಿಸಲಾಗಿದೆ. ಮೊದಲನೇ ವಲಯ 17 ಮಂದಿ ಸಾವನ್ನಪ್ಪಿರೋ ಪ್ರದೇಶ ಇದಾಗಿದ್ದು, ಇದನ್ನು ಸಂಪೂರ್ಣ ಲಾಕ್ ಮಾಡಲಾಗಿದೆ. ಈ ಗ್ರಾಮಕ್ಕೆ ಯಾವುದೇ ಜನರಿಗೆ ಇಲ್ಲಿ ಪ್ರವೇಶವಿಲ್ಲ ಹಾಗೂ ಮೃತರ ಮನೆಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಇನ್ನು ಈ ಪ್ರದೇಶಕ್ಕೆ ಹೋಗುವವರಿಗೆ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಎರಡನೇ ವಲಯದ ಮೃತ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿರುವವರು ವಾಸಿಸುತ್ತಿವ ಜಾಗ ಇದಾಗಿದ್ದು. ಈ ವಲಯದಲ್ಲಿರುವ ಹಲವರಿಗೆ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ಈ ಪ್ರದೇಶಕ್ಕೆ ಅನಗತ್ಯವಾಗಿ ಹೋಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಮೂರನೇ ವಲಯ ಒಂದು ಮತ್ತು ಎರಡನೇ ವಲಯ ಹೊರತು ಪಡೆಸಿದ ಗ್ರಾಮದ ಜಾಗವನ್ನು ಮೂರನೇ ವಲಯ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಈ ಭಾಗ ಇರುವುದರಲ್ಲಿ ಸುರಕ್ಷಿತ ಪ್ರದೇಶ ಎಂದು ಪರಿಗಣಿಸಲಾಗಿದೆ. ಅಗತ್ಯ ಮುಂಜಾಗೃತೆವಹಿಸುವಂತೆ ಈ ವಲಯದವರಿಗೂ ಸೂಚನೆಗಳನ್ನು ನೀಡಲಾಗಿದೆ. ಕಂಟೈನ್‌ಮೆಂಟ್ ಝೋನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸೋಂಕಿತರ ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಸಂಪರ್ಕತರನ್ನು ಕ್ವಾರಂಟೈನ್ ನಲ್ಲಿ ಇರಿಸುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.