ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತ್ಮಹತ್ಯೆ ಘಟನೆಗಳು ವರದಿಯಾಗಿವೆ. ಈ ನಡುವೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದುರಾಡಳಿತವನ್ನು ಹತ್ತಿಕ್ಕಲು ಸದ್ಯ ಇರುವ ಕಾನೂನು ಪರಿಣಾಮಕಾರಿಯಾಗಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.
ರಾಜ್ಯದಾದ್ಯಂತ ಎಂಎಫ್‌ಐಗಳಿಂದ ಕಿರುಕುಳದ ಬಗ್ಗೆ ದೂರುಗಳು ಬಂದಿವೆ. ಸದ್ಯ ಅಸ್ತಿತ್ವದಲ್ಲಿರುವ ಕಾನೂನುಗಳು ಅಷ್ಟೇನು ಪರಿಣಾಮಕಾರಿಯಾಗಿಲ್ಲ ಎಂಬುದು ನಮಗೆ ತಿಳಿದು ಬಂದಿದೆ. ಕಾಂಗ್ರೆಸ್ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ತರಲಿದೆ ಎಂದಿದ್ದಾರೆ.
‘ಬ್ಯಾಂಕ್ ನಿಯಮಾನುಸಾರ ಸಾಲ ವಸೂಲಾತಿ ಹಾಗೂ ಅವುಗಳ ರಕ್ಷಣೆಗೆ ಕಾನೂನು ಇದೆ. ಆದರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ಎದುರಿಸಲು ಸದ್ಯ ಇರುವ ಕಾನೂನುಗಳು ಪರಿಣಾಮಕಾರಿಯಾಗಿಲ್ಲ ಮತ್ತು ಅವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವು ಕಠಿಣವಾಗಿಲ್ಲ ಎಂದು ನಮ್ಮ ಇಲಾಖೆಯಿಂದ ನಾವು ವರದಿಗಳನ್ನು ಪಡೆದಿದ್ದೇವೆ’ ಎಂದರು.
‘ಭವಿಷ್ಯದಲ್ಲಿ, ಎಂಎಫ್‌ಐಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕಾನೂನುಗಳನ್ನು ರಚಿಸುವ ಅವಶ್ಯಕತೆಯಿದೆ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾನೂನುಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ನಡುವೆ, ರಾಜ್ಯದ ಕೆಲವೆಡೆ ನಡೆಯುತ್ತಿರುವ ಕಿರುಕುಳದ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.