ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮುಂಬರುವ ತಿಂಗಳುಗಳಲ್ಲಿ ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಮೂಲಭೂತ ಮಾದರಿಯನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಗುರುವಾರ ತಿಳಿಸಿದ್ದಾರೆ.
ಚ್ಯಾಟ್ಜಿಪಿಟಿ, ಡೀಪ್ಸೀಕ್, ಜೆಮಿನಿ ರೀತಿಯಲ್ಲಿ ಇನ್ನು 8-10 ತಿಂಗಳಲ್ಲಿ ಭಾರತದ ಕಂಪನಿಯೊಂದು ಉತ್ಕೃಷ್ಟ ಎಐ ಫೌಂಡೇಶನ್ ಮಾಡಲ್ ಅನ್ನು ಆಭಿವೃದ್ಧಿಗೊಳಿಸುವ ನಿರೀಕ್ಷೆ ಇದೆ.
ರೂ. 10,370 ಕೋಟಿ India AI ಮಿಷನ್ನ ಭಾಗವಾಗಿ ದೇಶೀಯ ದೊಡ್ಡ ಭಾಷಾ ಮಾದರಿಯನ್ನು (LLM) ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದ ವೈಷ್ಣವ್, ಸಾಮಾನ್ಯ ಕಂಪ್ಯೂಟಿಂಗ್ ಸೌಲಭ್ಯದ ಅಡಿಯಲ್ಲಿ 18,693 ಗ್ರಾಫಿಕ್ಸ್ ಸಂಸ್ಕರಣಾ ಘಟಕ (ಜಿಪಿಯು) ಪೂರೈಸುವ 10 ಕಂಪನಿಗಳನ್ನು ಸರ್ಕಾರ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಹಿರಾನಂದಾನಿ ಗ್ರೂಪ್ ಬೆಂಬಲಿತ ಯೊಟ್ಟಾ, ಜಿಯೋ ಪ್ಲಾಟ್ಫಾರ್ಮ್ಗಳು, ಟಾಟಾ ಕಮ್ಯುನಿಕೇಷನ್ಸ್, ಇ2ಇ ನೆಟ್ವರ್ಕ್ಗಳು, ಸಿಎಮ್ಎಸ್ ಕಂಪ್ಯೂಟರ್ಗಳು, ಸಿಟಿಆರ್ಎಲ್ಎಸ್ ಡೇಟಾಸೆಂಟರ್ಗಳು, ಲೊಕಜ್ ಎಂಟರ್ಪ್ರೈಸ್ ಸೊಲ್ಯೂಷನ್ಸ್, ಎನ್ಎಕ್ಸ್ಟಿಜೆನ್ ಡೇಟಾಸೆಂಟರ್, ಓರಿಯಂಟ್ ಟೆಕ್ನಾಲಜೀಸ್ ಮತ್ತು ವೆನ್ಸಿಸ್ಕೋ ಟೆಕ್ನಾಲಜೀಸ್ ಕಂಪನಿಗಳು ಸೇರಿವೆ.
ಕಳೆದ 1.5 ವರ್ಷಗಳಲ್ಲಿ, ನಮ್ಮ ತಂಡಗಳು ಸ್ಟಾರ್ಟ್ಅಪ್ಗಳು, ಸಂಶೋಧಕರು, ಪ್ರಾಧ್ಯಾಪಕರು ಮುಂತಾದವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿವೆ. ಇಂದು, ನಮ್ಮದೇ ಆದ ಮೂಲಭೂತ ಮಾದರಿಯನ್ನು ಅಭಿವೃದ್ಧಿಪಡಿಸಲು ನಾವು ಪ್ರಸ್ತಾಪಗಳನ್ನು ಸ್ವೀಕರಿಸುತ್ತಿದ್ದೇವೆ. ಈ ಮಾದರಿಯು ಭಾರತೀಯ ಸಂದರ್ಭ, ಭಾಷೆಗಳು, ಸಂಸ್ಕೃತಿಯನ್ನು ನೋಡಿಕೊಳ್ಳುತ್ತದೆ, ಪಕ್ಷಪಾತಗಳಿಂದ ಮುಕ್ತವಾಗಿದೆ ಎಂದು ವೈಷ್ಣವ್ ತಿಳಿಸಿದರು.
ಆಧುನಿಕ ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು, ಪ್ರಧಾನಿ ಮೋದಿ ಅವರ ಚಿಂತನೆ. ಈ ಸಮಯದಲ್ಲಿ ನಮ್ಮದು ಅತ್ಯಂತ ಕೈಗೆಟುಕುವ ಕಂಪ್ಯೂಟ್ ಸೌಲಭ್ಯವಾಗಿದೆ ಎಂದು ಐಟಿ ಸಚಿವರು ತಿಳಿಸಿದ್ದಾರೆ.
ಡೀಪ್ಸೀಕ್ನ ಸುತ್ತಲಿನ ಗೌಪ್ಯತಾ ಕಾಳಜಿಗಳ ಬಗ್ಗೆ ಕೇಳಿದಾಗ, ಗೌಪ್ಯತಾ ಕಾಳಜಿಗಳನ್ನು ಪರಿಹರಿಸಲು ಭಾರತವು ಭಾರತೀಯ ಸರ್ವರ್ಗಳಲ್ಲಿ ಅದನ್ನು ಹೋಸ್ಟ್ ಮಾಡುತ್ತದೆ ಎಂದು ಅವರು ಹೇಳಿದರು.