ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ದಿನೇ ದಿನ ಹೆಚ್ಚಾಗುತ್ತಿದೆ. ಇತ್ತ ಭಾರತೀಯ ರೈಲ್ವೇ ವಿಶೇಷ ರೈಲುಗಳನ್ನು ಘೋಷಿಸಿದೆ. ಇದರ ನಡುವೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರಿ ಮಹತ್ವದ ಘೋಷಣೆ ಮಾಡಿದೆ. ಮಹಾಕುಂಭ ಮೇಳ ಭಕ್ತರಿಗೆ ಉಚಿತ ಪ್ರಯಾಣ, ಉಚಿತ ಊಟ ಹಾಗೂ ಉಚಿತ ಔಷಧಿಗಳ ತೀರ್ಥ ಯಾತ್ರಿ ಸೇವಾ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆ ಈಗಾಗಲೇ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ಆರಂಭಗೊಂಡಿದೆ.
ರಿಲಯನ್ಸ್ ಕಂಪನಿಯ ವಿ ಕೇರ್ ಪರಿಕಲ್ಪನೆಯ ಅಡಿಯಲ್ಲಿ ಇದೀಗ ಮಹಾಕುಂಭ ಮೇಳದ ಭಕ್ತರಿಗೆ ಸೇವೆ ನೀಡಲು ರಿಲಯನ್ಸ್ ಮುಂದಾಗಿದೆ. ಈ ಕುರಿತು ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರಿ ನಿರ್ದೇಶಕ ಅನಂತ್ ಅಂಬಾನಿ, ಮಹಾಕುಂಭ ಮೇಳದಲ್ಲಿ ಭಕ್ತರಿಗೆ ಸಣ್ಣ ಸೇವೆ ನೀಡುವ ಅವಕಾಶ ಒದಗಿ ಬಂದಿರುವುದು ನಮ್ಮ ಸೌಭಾಗ್ಯ ಎಂದಿದ್ದಾರೆ. ಭಕ್ತರ ಆಧ್ಯಾತ್ಮಿಕತೆಯಲ್ಲಿ ರಿಲಯನ್ಸ್ ಸಣ್ಣ ಕೊಡುಗೆ ನೀಡುತ್ತಿದೆ. ಮಹಾಕುಂಭ ಮೇಳದ ಆಶೀರ್ವಾದದೊಂದಿಗೆ ಈ ಸೇವೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಮಹಾಕುಂಭ ಮೇಳ ಅತೀ ದೊಡ್ಡ ಹಿಂದೂ ಧರ್ಮದ ಆಧ್ಯಾತ್ಮಿಕ ಹಬ್ಬ. ಈ ಪುಣ್ಯ ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರಿ, ಇಲ್ಲಿಗೆ ಆಗಮಿಸುತ್ತಿರುವ ಕೋಟ್ಯಾಂತರ ಭಕ್ತರ ಆರೋಗ್ಯ, ಸುರಕ್ಷತೆ, ಪ್ರಯಾಣ, ಆಹಾರ ಕುರಿತು ಕಾಳಜಿ ವಹಿಸಲಿದೆ. ಈ ಮೂಲಕ ಭಕ್ತರ ಆಧ್ಯಾತ್ಮಿಕ ಪ್ರಯಾಣ ಸುಗಮವಾಗಿಸಲು ರಿಲಯನ್ಸ್ ನೆರವಾಗಲಿದೆ ಎಂದಿದ್ದಾರೆ.
ಮಹಾಕುಂಭ ಮೇಳಕ್ಕೆ ಆಗಮಿಸವ ಭಕ್ತರಿಗೆ ಪ್ರಯಾಣದ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಇನ್ನು ಮಹಾಕುಂಭ ಮೇಳದ ಭಕ್ತರಿಗೆ ಬಿಸಿ ಬಿಸಿ ಊಟ, ನೀರು ನೀಡುತ್ತಿದೆ. ರಿಲಯನ್ಸ್ ಅನ್ನ ಸೇವಾ ಯೋಜನೆಯಡಿ ಈ ಸೌಲಭ್ಯ ಒದಗಿಸಲಾಗಿದೆ. ರಿಲಯನ್ಸ್ ಸ್ವಯಂ ಸೇವಕರು ಮಹಾಕುಂಭ ಮೇಳದಲ್ಲಿ ಅಖರ, ಸಾಧು ಸಂತರು, ಭಕ್ತರಿಗೆ ಉಚಿತ ಆಹಾರ ತಲುಪಿಸುತ್ತಿದ್ದಾರೆ. ಇತ್ತ ರಿಲಯನ್ಸ್ ಆರೋಗ್ಯ ಸುವಿಧಾ ಯೋಜನೆ ಮೂಲಕ ಉಚಿತ ಆರೋಗ್ಯ ಕಾಳಜಿ ವಹಿಸುತ್ತಿದೆ. ಪುರುಷ ಹಾಗೂ ಮಹಿಳಾ ಪ್ರತ್ಯೇಕ ಒಪಿಡಿ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ವೇಳೆ ಮಹಿಳಾ ಭಕ್ತರಿಗೆ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ಸ್ ಸೇರಿದಂತೆ ಹಲವು ಸೌಲಭ್ಯ ನೀಡಲಾಗುತ್ತಿದೆ.