ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ: ನೆತನ್ಯಾಹು ಭೇಟಿ ಬಳಿಕ ಶಾಕ್ ಕೊಟ್ಟ ಟ್ರಂಪ್ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್- ಹಮಾಸ್ ನಡುವಿನ ಕದನ ವಿರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇಸ್ರೇಲ್​ನ ಗಾಜಾ ಪಟ್ಟಿಯನ್ನು ಸ್ವಾಧೀನಕ್ಕೆ ಪಡೆಯಲು ಪ್ಲಾನ್ ಮಾಡಿದ್ದಾರೆ. ಅಮೆರಿಕಕ್ಕೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಮಾತುಕತೆಯ ನಂತರ ಟ್ರಂಪ್ ಈ ಬಗ್ಗೆ ಘೋಷಣೆ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ. ಟ್ರಂಪ್‌ ಅವರ ಈ ಹೊಸ ಪ್ರಸ್ತಾಪ ವಿಶ್ವವನ್ನೇ ನಿಬ್ಬೆರಗಾಗುವಂತೆ ಮಾಡಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಶ್ವೇತಭವನದ ಭೇಟಿಯ ಸಮಯದಲ್ಲಿ ಗಾಜಾವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾವವನ್ನು ಟ್ರಂಪ್ ಮಂಡಿಸಿದ್ದಾರೆ. ಟ್ರಂಪ್ ಆವರ ಆಫರ್ ಅನ್ನು ಎರಡು ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿದೆ. ಆದರೂ, ಯುದ್ದ ಪೀಡಿತ ಪ್ರದೇಶದಿಂದ ಹೊರಕ್ಕೆ ಹೋಗಬೇಕು ಮತ್ತು ಈಜಿಪ್ಟ್ ಅಥವಾ ಜೋರ್ಡಾನ್ ಮುಂತಾದ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ಯಾಲೆಸ್ತೀನಿಯನ್ನರು ಸ್ಥಳಾಂತರಗೊಳ್ಳಬೇಕು ಎಂದು ಟ್ರಂಪ್‌ ಒತ್ತಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ನೆತನ್ಯಾಹು ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ಗಾಜಾವನ್ನು ಅಮೆರಿಕ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಇದೇ ವೇಳೆ ಸ್ಫೋಟಗೊಳ್ಳದ ಬಾಂಬ್ ಗಳನ್ನು ನಿಷ್ಕಿಯಗೊಳಿಸಲಾಗುವುದು. ಯುದ್ದದಿಂದ ನೆಲಸಮವಾಗಿರುವ ಕಟ್ಟಡದ ಅವಶೇಷಗಳ ಜಾಗವನ್ನು ಸಮತಟ್ಟು ಮಾಡಲಾಗುವುದು. ಆರ್ಥಿಕತೆಯನ್ನು ಸರಿದಾರಿಗೆ ತರಲಾಗುವುದು ಮತ್ತು ಅಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಸಲಾಗುವುದು ಎಂಬ ಆಫರ್‌ಗಳನ್ನೂ ಟ್ರಂಪ್‌ ನೀಡಿದ್ದಾರೆ. ಜೊತೆಗೆ ಗಾಜಾದಲ್ಲಿರುವ ಸುಮಾರು 20 ಲಕ್ಷ ನಾಗರಿಕರು ಬೇರೆ ದೇಶಕ್ಕೆ ಹೋಗಬೇಕು ಎನ್ನುವ ಷರತ್ತನ್ನೂ ವಿಧಿಸಿದ್ದಾರೆ.

ನಮ್ಮ ಆಫರ್ ಸ್ವೀಕರಿಸಲು ಇವರು ಯೋಗ್ಯರಲ್ಲ, ಇವರಿಗಾಗಿ ನಾವು ಅಷ್ಟೊಂದು ಹಣ ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ. ಅಷ್ಟೊಂದು ಅನಾಹುತ ನಡೆಯುತ್ತಿದ್ದರೂ, ತಮ್ಮ ಹಕ್ಕಿಗಾಗಿ, ತಮ್ಮ ಜೀವನಕ್ಕಾಗಿ ಇವರು ಪಣತೊಟ್ಟವರಲ್ಲ. ತಮ್ಮ ಇಂದಿನ ಶೋಚನೀಯ ಸ್ಥಿತಿಗೆ ಅವರೇ ಕಾರಣ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.

ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿಗೊಳಿಸಿದ ನಂತರ ಅಮೆರಿಕವು ಗಾಜಾವನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಯೋಜನೆಯಡಿ ಪ್ಯಾಲೆಸ್ತೀನಿಯರನ್ನು ಬೇರೆಡೆ ಪುನರ್ವಸತಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆಯು ಎನ್ಕ್ಲೇವ್ ಅನ್ನು “ಮಧ್ಯಪ್ರಾಚ್ಯದ ರಿವೇರಿಯಾ” ಆಗಿ ಪರಿವರ್ತಿಸಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಗಾಜಾದಲ್ಲಿರುವ ನಾಶವಾದ ಕಟ್ಟಡಗಳನ್ನು ತೆರವುಗೊಳಿಸುವ ಮತ್ತು ಸ್ಫೋಟಗೊಳ್ಳದ ಅಪಾಯಕಾರಿ ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಅಮೆರಿಕದ ಆಡಳಿತವು ವಹಿಸಿಕೊಳ್ಳುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಇತ್ತ ಗಾಜಾವನ್ನು ಆಳುವ ಪ್ಯಾಲೆಸ್ಟೀನಿಯನ್ ಗುಂಪಾದ ಹಮಾಸ್ ಈ ಪ್ರಸ್ತಾಪವನ್ನು ಖಂಡಿಸಿದೆ. ಈ ಪ್ರದೇಶದಲ್ಲಿ ಅವ್ಯವಸ್ಥೆ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸುವ ಪ್ರಯತ್ನವಿದು. ಗಾಜಾ ಪಟ್ಟಿಯಲ್ಲಿರುವ ನಮ್ಮ ಜನರು ಈ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಹಮಾಸ್ ಟ್ರಂಪ್ ಪ್ರಸ್ತಾಪವನ್ನು ತೀವ್ರವಾಗಿ ಖಂಡಿಸಿತು.

ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಅವರ ಈ ಪ್ರಸ್ತಾಪವು ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ವಿಸ್ತರಿಸಲು ಮುಂದಿನ ಸುತ್ತಿನ ಮಾತುಕತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗಾಗಲೇ ಇಸ್ರೇಲ್ ಮತ್ತು ಹಮಾಸ್​ನಿಂದ ಕದನ ವಿರಾಮದ ಒಪ್ಪಂದದಂತೆ ಹಲವು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. 33 ಇಸ್ರೇಲಿ ಸೆರೆಯಾಳುಗಳು ಮತ್ತು ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡುವ ಆರಂಭಿಕ 42 ದಿನಗಳ ಒಪ್ಪಂದವು ಮಾರ್ಚ್ 1ರಂದು ಮುಕ್ತಾಯಗೊಳ್ಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!