ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಂಪಿಯನ್ಸ್ ಟ್ರೋಫಿ ಮುಕ್ತಾಯದೊಂದಿಗೆ ರೋಹಿತ್ ಶರ್ಮಾ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ಈ ಮೂಲಕ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ.
ಈ ಟೂರ್ನಿಯ ಬಳಿಕ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಸಿಸಿಐ ಬಯಸಿದೆ. ಇದೇ ಕಾರಣದಿಂದಾಗಿ ಚಾಂಪಿಯನ್ಸ್ ಟ್ರೋಫಿಯ ಬಳಿಕ ನಿವೃತ್ತಿ ಘೋಷಿಸುವಂತೆ ರೋಹಿತ್ ಶರ್ಮಾಗೆ ಸೂಚಿಸಲಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.
ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ಅಂತಿಮ ಪಂದ್ಯವೇ ರೋಹಿತ್ ಶರ್ಮಾ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಏಕದಿನ ಮ್ಯಾಚ್ ಆಗಿರಲಿದೆ. ಆ ಬಳಿಕ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ಆಯ್ಕೆಗೆ ಪರಿಗಣಿಸುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.
2027ರ ಏಕದಿನ ವಿಶ್ವಕಪ್ಗೆ ಪ್ಲ್ಯಾನ್
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಟೀಮ್ ಇಂಡಿಯಾದ ಆಯ್ಕೆದಾರರು 2027 ರ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲು ಬಯಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರ ನಿಲುವು ಕೂಡ ಸ್ಪಷ್ಟವಾಗಿರಬೇಕು.ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಟೂರ್ನಮೆಂಟ್ ನಂತರ, ಟೀಮ್ ಇಂಡಿಯಾದಲ್ಲಿ ಬದಲಾವಣೆ ಕಂಡು ಬರುವುದು ಖಚಿತ. ಹೀಗಾಗಿ ರೋಹಿತ್ ಶರ್ಮಾ ಅವರ ಭವಿಷ್ಯವೂ ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಅವಲಂಬಿಸಿದೆ.
ಹೀಗಾಗಿಯೇ ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ರೋಹಿತ್ ಶರ್ಮಾಗೆ ಬಿಸಿಸಿಐ ಕಡೆಯಿಂದ ನಿವೃತ್ತಿ ಸೂಚನೆ ದೊರೆತಿದ್ದು, ಈ ಬಾರಿಯ ಟೂರ್ನಿಯ ಬಳಿಕ ಅವರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಕಡೆಯಿಂದ ಏಕದಿನದಿಂದಲೂ ಬಿಸಿಸಿಐ ನಿವೃತ್ತಿ ಬಯಸುತ್ತಿರುವುದು ಸ್ಪಷ್ಟ. ಅತ್ತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿರುವ ಕಾರಣ ಅವರನ್ನು ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬಹುದು.