ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಶವ ಸಂಭೋಗ ಎಂಬುದು ಅತ್ಯಾಚಾರ ಅಪರಾಧವಾಗದು ಎಂದು ಹೈಕೋರ್ಟ್ 2023ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾ.ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು, ಸಂಸತ್ತು ಈ ವಿಚಾರವಾಗಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ ಕಾಯಿದೆಯಲ್ಲಿ ಬದಲಾವಣೆ ಮಾಡಬಹುದು. ಈ ಸಂಬಂಧ ಸರ್ಕಾರ ಸಂಸತ್ತಿಗೆ ಪತ್ರ ಬರೆಯಬಹುದು ಎಂದು ತಿಳಿಸಿದೆ.
ಪ್ರಕರಣದ ಆರೋಪಿ 21 ವರ್ಷದ ಮಹಿಳೆಯನ್ನು ಕೊಲೆ ಮಾಡಿ ನಂತರ ಮೃತದೇಹದೊಂದಿಗೆ ಸಂಭೋಗ ನಡೆಸಿದ್ದನು. ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಮತ್ತು ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ ಎರಡೂ ಕೃತ್ಯಗಳಿಗೆ ಶಿಕ್ಷೆ ವಿಧಿಸಿತ್ತು.
ಇದಾದ ಬಳಿಕ 2023ರಲ್ಲಿ ತೀರ್ಪು ನೀಡಿದ ಹೈಕೋರ್ಟ್ ಶವ ಸಂಭೋಗ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಲ್ಲದೆ ಅದು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಅಸ್ವಾಭಾವಿಕ ಲೈಂಗಿಕ ಕೃತ್ಯದ ವ್ಯಾಪ್ತಿಗೂ ಬರುವುದಿಲ್ಲ ಎಂದಿತ್ತು. ಐಪಿಸಿ ಸೆಕ್ಷನ್ 375 ಮತ್ತು 377ನ್ನು ಎಚ್ಚರಿಕೆಯಿಂದ ಓದಿದಾಗ, ಮೃತ ದೇಹವನ್ನು ಮನುಷ್ಯ ಅಥವಾ ವ್ಯಕ್ತಿ ಎಂದು ಕರೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ, 375 ಅಥವಾ 377ನೇ ಸೆಕ್ಷನ್‌ಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ವಿವರಿಸಿತ್ತು.
ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿತ್ತಾದರೂ ಮಹಿಳೆಯ ಮೃತ ದೇಹದ ಮೇಲೆ ಅತ್ಯಾಚಾರ ನಡೆದಿದ್ದ ಕಾರಣಕ್ಕೆ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿತ್ತು.
ಹೀಗಾಗಿ ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಸರ್ಕಾರದ ಪರವಾಗಿ ಹಾಜರಾದ ವಕೀಲ ಅಮನ್ ಪನ್ವರ್, ಮೃತ ವ್ಯಕ್ತಿ ಲೈಂಗಿಕ ಕ್ರಿಯೆಗಳಿಗೆ ಒಪ್ಪಿಗೆ ನೀಡುವುದು ಸಾಧ್ಯವಿಲ್ಲದ ಕಾರಣ, ಮೃತದೇಹದ ಮೇಲಿನ ಅತ್ಯಾಚಾರವನ್ನು ಸೆಕ್ಷನ್ ವ್ಯಾಪ್ತಿಗೆ ಒಳಪಡುವಂತೆ ಅದನ್ನು ವ್ಯಾಖ್ಯಾನಿಸಬೇಕು ಎಂದು ವಾದಿಸಿದರು.
ಸೆಕ್ಷನ್ 375(ಸಿ)ನಲ್ಲಿ ಬಳಸಲಾದ `ದೇಹ’ ಎಂಬ ಪದವನ್ನು `ಮೃತ ದೇಹ’ ಎಂತಲೂ ಪರಿಗಣಿಸಬೇಕು. ಸೆಕ್ಷನ್ 375 ರ ಏಳನೇ ವಿವರಣೆಯು ಮಹಿಳೆಯು ಒಪ್ಪಿಗೆಯನ್ನು ತಿಳಿಸಲು ಸಾಧ್ಯವಾಗದಿದ್ದಾಗಲೂ ಸಹ ಅದನ್ನು ಅತ್ಯಾಚಾರವೆಂದು ಪರಿಗಣಿಸಬೇಕು ಎನ್ನುತ್ತದೆ. ಈ ವಿವರಣೆಯನ್ನು ಆಧರಿಸಿಯಾದರೂ ಮೃತ ದೇಹದ ಮೇಲಿನ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರಬೇಕು. ನ್ಯಾಯಾಲಯ ಸೆಕ್ಷನ್ 375ನ್ನು ಹೆಚ್ಚು ಆಳವಾಗಿ ಪರಿಗಣಿಸದೆ ಮೃತ ದೇಹದ ಮೇಲಿನ ಅತ್ಯಾಚಾರವನ್ನೂ ಒಳಗೊಳ್ಳುವಂತೆ ಉದಾರವಾಗಿ ಅರ್ಥೈಸಬೇಕು ಎಂದು ಪನ್ವರ್ ಹೇಳಿದರು. ಮೃತ ದೇಹಗಳಿಗೂ ಘನತೆ ಮತ್ತು ನ್ಯಾಯಪರತೆ ಅನ್ವಯಿಸಬೇಕು ಎಂದು ಪಂಡಿತ್ ಪರಮಾನಂದ ಕಟಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1995ರಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ಅವರು ವಾದ ಮಂಡಿಸಿದರು.
ಶವ ಸಂಭೋಗವನ್ನು ಅತ್ಯಾಚಾರದ ವ್ಯಾಪ್ತಿಗೆ ತರುವುದಕ್ಕಾಗಿ ಪ್ರಭುತ್ವ ಮತ್ತು ಬ್ರೋಬೆಕ್ ನಡುವಣ ಪ್ರಕರಣದಲ್ಲಿ ಅಮೆರಿಕದ ಟೆನ್ನೆಸ್ಸೀ ಪ್ರಾಂತದ ಸುಪ್ರೀಂ ಕೋರ್ಟ್ ಸೇರಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯಗಳು ದಂಡ ಸಂಹಿತೆಯ ಸೆಕ್ಷನ್‌ಗಳನ್ನು ವಿಸ್ತರಿಸಿವೆ ಎಂದು ಅವರು ಪ್ರಸ್ತಾಪಿಸಿದರು. ಆದರೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನ್ಯಾಯಾಲಯ ನಿರಾಕರಿಸಿತು.