ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಫೆ.20ರೊಳಗಾಗಿ ಥರ್ಮಲ್ ಪ್ರಿಂಟರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ಸೂಚನೆ ನೀಡಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಜರುಗಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಇಲಾಖಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಪಡಿತರ ಚೀಟಿ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ತೊಂದರೆ ಅಗದಂತೆ ನಿಗಾವಹಿಸುವದರ ಜೊತೆಗೆ ಅನರ್ಹ ಬಿ.ಪಿ.ಎಲ್ ಕಾರ್ಡಗಳನ್ನು ಪತ್ತೆ ಹಚ್ಚಲು ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಫೆ.20ರೊಳಗಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಥರ್ಮಲ್ ಪ್ರಿಂಟರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಆಹಾರ ಧಾನ್ಯಗಳನ್ನು ಸರಬರಾಜು ಮಾಡುವಂತಹ ಲಾರಿಗಳಿಗೆ ಜಿ.ಪಿ.ಎಸ್ ಅಳವಡಿಸುವುದು ಕಡ್ಡಾಯವಾಗಿದ್ದು ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು. ಬೆಂಬಲ ಬೆಲೆ ಯೋಜನೆ ಅಡಿ ತೆರೆಯಲಾದ ಖರೀದಿ ಕೇಂದ್ರಗಳಲ್ಲಿ ನಿಯಮಾನುಸಾರ ಆಹಾರ ಧಾನ್ಯಗಳನ್ನು ಖರೀದಿಸಲಾಗುತ್ತಿರುವ ಕುರಿತು ಪರಿಶೀಲಿಸಬೇಕು. ಸರ್ಕಾರ ನಿಗದಿ ಪಡಿಸಿದ ದರದಂತೆ ಬೆಂಬಲ ಬೆಲೆಯಡಿ ಖರೀದಿಸಬೇಕು ಈ ಯೋಜನೆಯಡಿ ಯಾವುದೇ ಅವ್ಯವಹಾರಗಳು ನಡೆಯದಂತೆ ನಿಗಾವಹಿಸಲು ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧೀನದಲ್ಲಿ ಇರುವಂತಹ ಗೋದಾಮುಗಳನ್ನು ನಿಯಮಿತವಾಗಿ ಪರಿಶೀಲಿಸಿ ಅವಶ್ಯಕತೆಗಿಂತ ಹೆಚ್ಚಿನ ಆಹಾರ ಧಾನ್ಯ ಸಂಗ್ರಹವಾಗದಂತೆ ನಿಗಾವಹಿಸಲು ತಿಳಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶೀಘ್ರವೆ ಜಾಗೃತ ಸಮಿತಿಗಳನ್ನು ರಚಿಸಲು ಸೂಚಿಸಿದರು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರನ್ನು ಶಾಸಕರುಗಳ ಜೊತೆ ನಿರಂತರ ಸಮನ್ವಯ ಸಾಧಿಸಬೇಕು. ಇದರ ಜೊತೆಗೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲ ಗ್ಯಾಸ್ ಏಜೆನ್ಸಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು.
ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಸಾಧನಗಳಲ್ಲಿ ರೈತರಿಗೆ ಮೋಸ ಆಗದಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಮಾರ್ಗಸೂಚಿಗಳನ್ವಯ ತೂಕದಸಾಧನಗಳನ್ನು ಅಳವಡಿಸಿರುವದರ ಕುರಿತು ಖಾತರಿ ಪಡಿಸಿಕೊಳ್ಳುವಂತರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಸೂಚನೆ ನೀಡಿದರು.