ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ 2025 ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ 11 ದಿನಗಳವರೆಗೆ ಯಲಹಂಕ ಬಳಿ ನಮ್ಮ ಮೆಟ್ರೋ ಕಾಮಗಾರಿಯನ್ನು ಸ್ಥಗಿತಗಳಿಸಲಾಗಿದೆ.
ಭಾರತೀಯ ವಾಯುಪಡೆ ಮನವಿ ಹಿನ್ನೆಲೆಯಲ್ಲಿ ಐಎಎಫ್ ಕ್ಯಾಂಪಸ್ ವ್ಯಾಪ್ತಿಗೆ ಬರುವ ಯಲಹಂಕ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬಿಎಂಆರ್’ಸಿಎಲ್ ಹೇಳಿದೆ.
ಕಾಮಗಾರಿ ನಡೆಯುತ್ತಿರುವ ಪಾರ್ಕಿಂಗ್ಗಾಗಿ ಸ್ಥಳಾವಕಾಶದ ಅಗತ್ಯವಿರುವುದರಿಂದ ಫೆಬ್ರವರಿ 5 ರಿಂದ 15 ರವರೆಗೆ ಕಾಮಗಾರಿ ಕಾರ್ಯ ನಿಲ್ಲಿಸುವಂತೆ ಐಎಎಫ್ ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಯಂತ್ರೋಪಕರಣಗಳು ಸ್ಥಳಾಂತರಿಸಿ, ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಫೆಬ್ರವರಿ 16 ರಿಂದ ಕೆಲಸವನ್ನು ಪುನರಾರಂಭಿಸಲಾಗುತ್ತದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಆರ್ ಪುರದಿಂದ ಕೆಐಎವರೆಗಿನ 37 ಕಿಮೀ ನಲ್ಲಿ ಒಟ್ಟು 17 ಮೆಟ್ರೋ ನಿಲ್ದಾಣಗಳು ಬರಲಿದ್ದು, ಮೂರು ಹಂತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮೂರನೇ ಹಂತದ ಕಾಮಗಾರಿಯು ಯಲಹಂಕದಿಂದ ಟರ್ಮಿನಲ್ 2 (15.01 ಕಿ.ಮೀ)ನಲ್ಲಿ ನಡೆಯಲಿದೆ. ಈ ಕಾಮಗಾರಿ ಐಎಎಫ್ ಕ್ಯಾಂಪಸ್ನಿಂದ ಪ್ರಾರಂಭವಾಗುತ್ತದೆ. ಹೀಗಾಗಿ 1 ಕಿ.ಮೀ ವರೆಗೆ ಕೆಲಸ ಸ್ಥಗಿತಗೊಂಡಿದೆ.