ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಮತದಾರರಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಹಿನ್ನೆಲೆಯಲ್ಲಿ ಸಂಪೂರ್ಣ ವಾಸ್ತವಾಂಶಗಳೊಂದಿಗೆ ಲಿಖಿತವಾಗಿ ಪ್ರತಿಕ್ರಿಯಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಆರೋಪ ಮಾಡಿದ ಕೂಡಲೇ ಚುನಾವಣಾ ಆಯೋಗ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ‘ರಾಜಕೀಯ ಪಕ್ಷಗಳನ್ನು ಆದ್ಯತೆಯ ಪಾಲುದಾರರು ಎಂದು ಇಸಿಐ ಪರಿಗಣಿಸುತ್ತದೆ. ಸಹಜವಾಗಿ ಮತದಾರರು ಕೂಡ ಪ್ರಧಾನರಾಗಿದ್ದಾರೆ ಮತ್ತು ರಾಜಕೀಯ ಪಕ್ಷಗಳಿಂದ ಬರುವ ಅಭಿಪ್ರಾಯಗಳು, ಸಲಹೆಗಳು ಮತ್ತು ಪ್ರಶ್ನೆಗಳನ್ನು ಆಯೋಗ ಗೌರವಿಸುತ್ತದೆ’ ಎಂದಿದೆ.
ದೇಶದಾದ್ಯಂತ ಏಕರೂಪವಾಗಿ ಅಳವಡಿಸಿಕೊಂಡಿರುವ ಸಂಪೂರ್ಣ ವಾಸ್ತವಿಕ ಮತ್ತು ಕಾರ್ಯವಿಧಾನ ಸಂಪೂರ್ಣ ಮಾಹಿತಿಯೊಂದಿಗೆ ಆಯೋಗವು ಲಿಖಿತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಆಯೋಗ ಹೇಳಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆ 9.54 ಕೋಟಿಯಷ್ಟಿದ್ದರೆ, ರಾಜ್ಯದಲ್ಲಿ 9.7 ಕೋಟಿ ಮತದಾರರಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಮತದಾರರಿದ್ದಾರೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 32 ಲಕ್ಷ ಮತದಾರರು ಸೇರ್ಪಡೆಯಾಗಿದ್ದರೆ, ಲೋಕಸಭೆ ಚುನಾವಣೆಯ ನಂತರ ಕೇವಲ ಐದು ತಿಂಗಳಲ್ಲಿ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.