ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸಿದೆ ಎಂಬ ಕೇಜ್ರಿವಾಲ್ ಆರೋಪದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಎಸಿಬಿ ತನಿಖೆಗೆ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಸಿಬಿ ತನಿಖೆಗೆ ಆದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ.ಇದರ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿ ತೀವ್ರ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.
AAP ಕಾನೂನು ಘಟಕದ ಅಧ್ಯಕ್ಷ ಸಂಜೀವ್ ನಾಸಿಯರ್ ಅವರು, ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೇಲೆ ACB ದಾಳಿಯನ್ನು ಪ್ರಶ್ನಿಸಿದ್ದು, ಇದು ತುಂಬಾ ಆಶ್ಚರ್ಯಕರ ಎಂದಿದ್ದಾರೆ.
ಎಸಿಬಿ ಅಧಿಕಾರಿಗಳ ಬಳಿ ಯಾವುದೇ ದಾಖಲೆಗಳು ಅಥವಾ ಸೂಚನೆ ಇಲ್ಲ ಮತ್ತು ನಿರಂತರವಾಗಿ ಫೋನ್ ಕರೆಗಳಲ್ಲಿದ್ದರು ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳು ಯಾರ ಆದೇಶದ ಮೇರೆಗೆ ಮಾಜಿ ಸಿಎಂ ಮನೆಗೆ ಆಗಮಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ರಾಜಕೀಯ ನಾಟಕ ಸೃಷ್ಟಿಸಲು ಬಿಜೆಪಿ ನಡೆಸುತ್ತಿರುವ ಪಿತೂರಿ ಇದು. ಶೀಘ್ರದಲ್ಲೇ ಇದು ಬಹಿರಂಗವಾಗಲಿದೆ ಎಂದು ನಾಸಿಯರ್ ಹೇಳಿದ್ದಾರೆ.