ಟಿಎಂಸಿಗೆ ಕಾಂಗ್ರೆಸ್ ನ ಅಗತ್ಯವಿಲ್ಲ, ಬಂಗಾಳದಲ್ಲಿ ಒಂಟಿಯಾಗಿ ಸ್ಪರ್ಧೆ: ಮಮತಾ ಬ್ಯಾನರ್ಜಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ ಪಕ್ಷಕ್ಕೆ ಕಾಂಗ್ರೆಸ್​ ಪಕ್ಷದ ಅಗತ್ಯವಿಲ್ಲ. ನಾವು ಒಂಟಿಯಾಗಿಯೇ ಸ್ಪರ್ಧೆ ಮಾಡುತ್ತೇವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​​ ‘ಶೂನ್ಯ’ ಸಂಪಾದನೆಯ ಬಳಿಕ ಪ್ರಾದೇಶಿಕ ಪಕ್ಷಗಳು ಒಂದೊಂದಾಗಿ ಅದರ ವಿರುದ್ಧ ಮುಗಿಬಿದ್ದಿವೆ. I.N.D.I.A ಕೂಟದ ನಾಯಕತ್ವ ಹೊಂದಿರುವ ಪಕ್ಷದ ಜೊತೆ 2026ರಲ್ಲಿ ನಡೆಯುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಘೋಷಿಸುವ ಮೂಲಕ ಹಳೆಯ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

ದೆಹಲಿಯಲ್ಲಿ ಎಎಪಿಗೆ ಕಾಂಗ್ರೆಸ್ ಸಹಾಯ ಮಾಡಲಿಲ್ಲ. ಇನ್ನು ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಎಎಪಿ ಸಹಾಯ ಮಾಡಲಿಲ್ಲ. ಆದ್ದರಿಂದ, ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಎಲ್ಲರೂ ಒಟ್ಟಾಗಿರಬೇಕು. ಆದರೆ ಬಂಗಾಳದಲ್ಲಿ ನಮಗೆ ಯಾರೂ ಅಗತ್ಯವೂ ಇಲ್ಲ. ಯಾಕೆಂದರೆ ಕಾಂಗ್ರೆಸ್‌ಗೆ ಬಂಗಾಳದಲ್ಲಿ ಏನೂ ಇಲ್ಲ ಎಂದು ಕುಟುಕಿದ್ದಾರೆ. ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯನ್ನು ಎದುರಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಟೀಕಿಸಿದರು.

ಇಂದಿನ ಸಭೆಯಲ್ಲಿ ಪ್ರಾಯೋಗಿಕವಾಗಿ ಮುಂದಿನ ವರ್ಷ ಬರುವ ಬಂಗಾಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ತೃಣಮೂಲ ನಾಯಕರು ಹಾಗೂ ಶಾಸಕರಿಗೆ ಸೂಚನೆ ನೀಡಿದ ಅವರು, ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಕೆಲಸದ ಬಗ್ಗೆ ಜನರಿಗೆ ತಿಳಿಸಲು ಸಧಾನೆಯ ಪುಸ್ತಕವನ್ನು ಹಸ್ತಾಂತರಿಸಿದರು. ಮುಂದಿನ ವರ್ಷದ ಚುನಾವಣೆಯಲ್ಲಿ ಜನರ ಪರವಾಗಿ ನಿಲ್ಲುವವರಿಗೆ ಮಾತ್ರವೇ ಟಿಕೆಟ್ ನೀಡುತ್ತೇವೆ. ಪಕ್ಷ ಸಂಘಟನೆಯ ವಿಷಯದಲ್ಲಿ ಸಕ್ರಿಯವಾಗಿರುವವರಿಗೆ ಮಾತ್ರವೇ ಬೆಂಬಲ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!