ಹೊಸ ದಿಗಂತ ವರದಿ, ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಬಳಿಯ ಜೆ.ಜೆ.ಕಾಲೋನಿ – ಚೌಳೂರು ಮಾರ್ಗದ ರಸ್ತೆಯಲ್ಲಿ ಪ್ರಭಾಕರ ಎಂಬ ವ್ಯಕ್ತಿ ಕೊಲೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಜೆ.ಕಾಲೋನಿ ನಿವಾಸಿಯಾದ ಪ್ರಭಾಕರ ಪರಶುರಾಂಪುರಕ್ಕೆ ಚಪ್ಪಲಿ ಹೊಲಿಯುವ ಕೆಲಸಕ್ಕೆ ಹೋಗುತ್ತಿದ್ದರು. ಪ್ರತಿ ದಿನದಂತೆ ಫೆ.೯ ರಂದು ಕೆಲಸ ಮುಗಿಸಿ ತನ್ನ ಗ್ರಾಮವಾದ ಜೆ.ಜೆ.ಕಾಲೋನಿಗೆ ಮರಳುವ ಸಂದರ್ಭದಲ್ಲಿ ಮಾರ್ಗಮಧ್ಯೆ ಸಂಜೆ ೭.೩೦ ರ ಸುಮಾರಿನಲ್ಲಿ ಕೊಲೆ ನಡೆದಿತ್ತು. ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು ಎಂದರು.
ಕೊಲೆ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸ್ ಅಧಿಕಾರಿಗಳ ಎರಡು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಕ್ರಮ ಕೈಗೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲ್ಲೂಕಿನ ಕುದುರಂಪಲ್ಲಿ ಗ್ರಾಮದ ಕೆ.ಆನಂದರೆಡ್ಡಿ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೋಟಗುಡ್ಡ ಗ್ರಾಮದ ರಾಮಕೃಷ್ಣ ಎಂದು ಗುರುತಿಸಲಾಗಿದೆ.
ಕೊಲೆ ಪ್ರಕರಣ ನಡೆದ ಮಾರನೇ ದಿನವೇ ಅಂದರೆ ಫೆ.೧೦ ರಂದು ಕೊಲೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿಎ. ಪೊಲೀಸರ ಪತ್ತೆ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.