ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ಇಂದು ಮತ್ತೆ ಕಾಂಗ್ರೆಸ್ ಸೇರಿದರು. ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್ ತೊರೆದಿದ್ದ ಇವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು. ಇದೀಗ ಮರಳಿ ಗೂಡಿಗೆ ಎಂಬಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಪಶ್ಚಿಮ ಬಂಗಾಳ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ಮಿರ್ ಆತ್ಮೀಯವಾಗಿ ಬರಮಾಡಿಕೊಂಡರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮುಖರ್ಜಿ, ಕಾಂಗ್ರೆಸ್ ಮತ್ತು ರಾಜಕೀಯದಲ್ಲಿ ಇದು ನನ್ನ ಎರಡನೇ ಹುಟ್ಟು. ಕಳೆದ ವರ್ಷ ಜೂನ್ನಲ್ಲಿಯೇ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ, ವಿವಿಧ ರಾಜ್ಯಗಳಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ವಿಳಂಬವಾಯಿತು. ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದು ತಪ್ಪಾಯಿತು. ಇದಕ್ಕಾಗಿ ಕ್ಷಮೆಯಾಚಿಸುವೆ. ಪಕ್ಷ ನನಗೆ ಎರಡನೇ ಅವಕಾಶ ನೀಡುತ್ತಿರುವುದಕ್ಕೆ ಸಂತಸವಾಗಿದೆ ಎಂದರು.
2021ರ ಜುಲೈನಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದ ಮುಖರ್ಜಿ ನಾಲ್ಕು ವರ್ಷಗಳ ಬಳಿಕ ಮತ್ತೆ ಪಕ್ಷ ಸೇರಿದ್ದಾರೆ. ಇದು ದೊಡ್ಡ ಬೆಳವಣಿಗೆ ಎಂದು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಂಕರ್ ಸರ್ಕಾರ್ ತಿಳಿಸಿದರು.
ಅಭಿಜಿತ್ ಮುಖರ್ಜಿ ಕಾಂಗ್ರೆಸ್ನಿಂದ ಎರಡು ಬಾರಿ ಲೋಕಸಭಾ ಸದಸ್ಯರಾಗಿಯೂ ಮತ್ತು ಒಂದು ಬಾರಿ ಪಶ್ಚಿಮ ಬಂಗಾಳ ಶಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದಾದ ಬಳಿಕ ರಾಜಕೀಯ ಚಟುವಟಿಕೆಯಿಂದ ಕೊಂಚ ಕಾಲ ದೂರ ಉಳಿದರು.