ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ಘೋಷಿಸುವ ಪದ್ಧತಿಗೆ ಸುಪ್ರೀಂ ಕೋರ್ಟ್ ಬುಧವಾರ ಅಸಮ್ಮತಿ ಸೂಚಿಸಿದೆ.
ಇತ್ತೀಚೆಗೆ ಚುನಾವಣೆಗೂ ಮುನ್ನ ಜನರ ಮನವೊಲಿಸೋದಕ್ಕಾಗಿ ಹಲವಾರು ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನೇ ಅಸ್ತ್ರವಾಗಿ ಬಳಸುತ್ತಿದೆ. ಆದ್ರೆ ಇದೀಗ ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳನ್ನು ಘೋಷಿಸುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.
ಜನರು ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಿರುವುದರಿಂದ ಕೆಲಸ ಮಾಡಲು ಸಿದ್ಧರಿಲ್ಲ ಎಂದು ಹೇಳಿದೆ. ಈ ಮೂಲಕ ರಾಜಕೀಯ ಪಕ್ಷಗಳು ನೀಡಿದ ಉಚಿತ ಭರವಸೆಗಳ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಕ್ರೈಸ್ಟ್ ಅವರ ಪೀಠವು ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಬೇಡಿಕೆಯ ಕುರಿತು ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಣೆ ವೇಳೆ ಈ ಹೇಳಿಕೆ ನೀಡಿದೆ.
ಜನರ ಬಗ್ಗೆ ನಿಮ್ಮ ಕಾಳಜಿಗೆ ನಾವು ಕೃತಜ್ಞರಾಗಿರುತ್ತೇವೆ, ಆದರೆ ಉಚಿತ ಪಡಿತರ ಮತ್ತು ಹಣವನ್ನು ನೀಡಿದರೆ ಅವರು ಯಾವುದೇ ಕೆಲಸಗಳನ್ನು ಮಾಡಲ್ಲ. ಅದರ ಬದಲು ಈ ಜನರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವುದು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಅವರಿಗೆ ಅವಕಾಶ ನೀಡುವುದು ಉತ್ತಮವಲ್ಲವೇ? ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ನಗರ ಬಡತನ ನಿರ್ಮೂಲನಾ ಮಿಷನ್ ಅನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಲೇ ಇದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪೀಠಕ್ಕೆ ತಿಳಿಸಿದರು. ಈ ಮಿಷನ್ ನಗರದ ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಇದನ್ನು ಆಲಿಸಿದ ಪೀಠ, ನಂತರ ನಗರ ಬಡತನ ನಿರ್ಮೂಲನಾ ಅಭಿಯಾನವನ್ನು ಯಾವಾಗ ಜಾರಿಗೆ ತರಲಾಗುವುದು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರವನ್ನು ಕೇಳುವಂತೆ ನ್ಯಾಯಪೀಠವು ಅಟಾರ್ನಿ ಜನರಲ್ ಅವರನ್ನು ಕೇಳಿತು. ಇದಾದ ನಂತರ, ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.