ಅಧಿಕಾರದಲ್ಲಿದ್ದಾಗ ಏನ್ ಮಾಡ್ದೆ ಹೇಳಪ್ಪಾ?: ಎಚ್‌ಡಿ ಕುಮಾರಸ್ವಾಮಿ -ಡಿಕೆ ಶಿವಕುಮಾರ್ ವಾಕ್ಸಮರ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ವಾಕ್ಸಮರ ಮುಂದುವರೆದಿದೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆತ ಪ್ರಕರಣ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದ ಎಚ್‌ಡಿಕೆ, ರಾಜ್ಯ ಸರ್ಕಾರ ಸತ್ತು ಹೋಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.

ನಾವೇನೋ ಸತ್ತು ಹೋಗಿದ್ದೀವಿ, ಓಕೆ… ನೀನು ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದೆ ಮೊದಲು ಹೇಳಪ್ಪಾ ಅಂತ ಏಕವಚನದಲ್ಲೇ ಟಾಂಗ್ ಕೊಟ್ಟಿದ್ದರು.

ಇದೀಗ ಡಿಕೆಶಿ ಹೇಳಿಕೆಗೆ ಎಚ್‌ಡಿಕೆ ಕಿಡಿಕಾರಿದ್ದಾರೆ. ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ? ಅಭಿವೃದ್ಧಿ ಮಾಡಿರುವವನು ಇಲ್ಲಿದ್ದೀನಿ, ನಾನು ರಾಮನಗರಕ್ಕೆ ಹೋಗುವ ಮುಂಚೆ ಹೇಗಿತ್ತು ಅಂತ ಪ್ರಶ್ನಿಸಿದ್ದಾರೆ.

ಎಚ್‌ಡಿಕೆ ವಿರುದ್ಧ ಡಿಕೆಶಿ ಏಕವಚನದಲ್ಲೇ ಕಿಡಿಕಾರಿದ್ದಾರೆ. ನಾವೇನೋ ಸತ್ತೋಗಿದ್ದೀವಿ, ಓಕೆ… ಆದ್ರೆ ನೀನು ಏನ್ ಮಾಡಿದ್ದೀಯಾ? ನೀನು ಅಧಿಕಾರದಲ್ಲಿ ಇದ್ದಾಗ ಏನ್ ಮಾಡಿದೆ ಮೊದಲು ಹೇಳಪ್ಪಾ, ಈಗ ಮಂತ್ರಿಗಿರಿ ಕೊಟ್ಟಿದ್ದಾರಲ್ಲ ನೀನು ಏನು ಮಾಡ್ತೀಯಾ ಮೊದಲು ಹೇಳು. ನಾವು ಸಹಕಾರ ಕೊಡ್ತೇವೆ. ನೀನು ಬರಿ ದ್ವೇಷದ ರಾಜಕೀಯ ಮಾಡ್ತಾ ಇದ್ದೀಯ ಅಂತ ಕಿಡಿಕಾರಿದ್ದಾರೆ.

ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದ್ರೆ ಕೇಂದ್ರದಲ್ಲಿ ಹೋಗಿ ತಕರಾರು ಮಾಡ್ತೀಯ. ನಾವು ಆ ತರ ತಕರಾರು ಮಾಡೋ ಕೆಲಸಕ್ಕೆ ಹೋಗೋದಿಲ್ಲ. ರಾಜನಾಥ್ ಸಿಂಗ್ ಬಂದು ಏನು ಹೇಳಿದ್ರು ಅದು ತಲೆಯಲ್ಲಿ ಇರಲಿ. ಒಂದು ದಿನದಲ್ಲಿ ಮೇಕೆದಾಟು ಯೋಜನೆ ಸಹಿ ಹಾಕಿಸ್ತೇನೆ ಅಂದ್ಯಲ್ಲಾ, ಯಾಕೆ ಮಾಡಲಿಲ್ಲ? ನಿನಗೆ ರಾಜಕಾರಣ ‌ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ. ದ್ವೇಷದ ರಾಜಕಾರಣನೇ ನಿನಗೆ ದೊಡ್ಡದಾಗಿದೆ ಅಂತ ಕಿಡಿಕಾರಿದ್ದಾರೆ.

ದೇಶದಲ್ಲಿ ನಾವೇಲ್ಲರೂ ಒಂದು ಅಂತ ನಾವು ಹೋಗ್ತೇವೆ, ದ್ವೇಷದಿಂದ ಯಾರೂ ಏನೂ ‌ಮಾಡಿಲ್ಲ. ಚಕ್ರವರ್ತಿಗಳೆಲ್ಲ ಕೆಳಗೆ ಬಿದ್ದೋಗಿದ್ದಾರೆ. ರಾಜಕಾರಣದಲ್ಲಿ ಯಾರೂ ಪರ್ಮನೆಂಟ್ ಅಲ್ಲ ಅಂತ ಡಿಕೆಶಿ ವಾಗ್ದಾಳಿ ನಡೆಸಿದ್ರು.

ಅಭಿವೃದ್ಧಿ ಮಾಡಿರುವವನು ನಾನು
ಅತ್ತ ಡಿಕೆಶಿ ಆರೋಪಕ್ಕೆ ಎಚ್‌ಡಿಕೆ ತಿರುಗೇಟು ಕೊಟ್ಟಿದ್ದಾರೆ. ಅವರು ಯಾವ ಅಭಿವೃದ್ಧಿ ಮಾಡಿದ್ದಾರೆ? ಅಭಿವೃದ್ಧಿ ಮಾಡಿರುವವನು ಇಲ್ಲಿದ್ದೀನಿ. ನಾನು ರಾಮನಗರಕ್ಕೆ ಹೋಗುವ ಮುಂಚೆ ಹೇಗಿತ್ತು? ಕನಕಪುರ ಹೇಗಿತ್ತು? ಎಸ್.ಎಂ. ಕೃಷ್ಣ ಅವರು ನಂಜುಂಡಪ್ಪ ವರದಿ ತರಿಸಿಕೊಂಡಾಗ 174 ಸ್ಥಾನ ಕೊನೆ ಹಂತದಲ್ಲಿತ್ತು. ಇವತ್ತು ಯಾವ ಮಟ್ಟಕ್ಕೆ ಬೆಳೆದಿದೆ, ಕಾರಣ ಯಾರು? ಅಂತ ಪ್ರಶ್ನಿಸಿದ್ದಾರೆ.

45 ಜಾಗವನ್ನೂ ಬಿಡ್ತಿಲ್ಲ
ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಸಾಕ್ಷಿ ಗುಡ್ಡೆ ಕೇಳ್ತಾರೆ, ನಾನಂತು ದೊಡ್ಡಮಟ್ಟದ ಸಾಕ್ಷಿ ಗುಡ್ಡೆ ಇಟ್ಟುಕೊಂಡಿಲ್ಲ. ಕಷ್ಟಪಟ್ಟು 45 ಎಕರೆ ಖರೀದಿ ಮಾಡಿದ್ದೆ, ಅದನ್ನೂ ಬಿಡ್ತಿಲ್ಲ, ಅದನ್ನೂ ಲಪಟಾಯಿಸಲು ಮುಂದಾಗಿದ್ದಾರೆ ಅಂತ ಎಚ್‌ಡಿಕೆ ಆರೋಪಿಸಿದರು.

ಸವಾಲು ಹಾಕಿದ ಎಚ್‌ಡಿಕೆ
ನಿನ್ನೆ ನನಗೆ ನೋಟೀಸ್ ಕೊಡದೆ ದಾಳಿ ಮಾಡಲು ಬಂದಿದ್ದರು. ನನ್ನ ಭೂಮಿ ಸರ್ವೆ ಮಾಡುವುದಾದರೆ ನೋಟೀಸ್ ಕೊಡಿ, ಇಂಟರ್ನ್ಯಾಷನಲ್ ಸರ್ವೆಯರ್ ಕರ್ಕೊಂಡು ಬನ್ನಿ, ಇಲ್ಲಿಯವರ ಕೈಯಲ್ಲಿ ಆಗಲ್ಲ. ಸರ್ವೆ ಮಾಡಲು ಯಾವುದಾದರೂ ಹೊರ ದೇಶದಿಂದ ಕರೆದುಕೊಂಡು ಬನ್ನಿ, ತಯಾರಾಗಿದ್ದೇನೆ ಅಂತ ಎಚ್‌ಡಿಕೆ ಸವಾಲು ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!