ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಕಲ್ಯಾಣ ಅದ್ಧೂರಿಯಾಗಿ ನಡೆಯಿತು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿಗೆ ಅನೇಕರು ಶುಭಕೋರಿದ್ದಾರೆ.
ಮೊನ್ನೆ ಆರತಕ್ಷತೆ, ನಿನ್ನೆ ಶುಭಲಗ್ನದಲ್ಲಿ ಮಾಂಗಲ್ಯ ಧಾರಣೆಯ ನೆರವೇರಿದ್ದರು. ಈ ಮೂಲಕ ಆ್ಯಕ್ಟರ್ ಮತ್ತು ಡಾಕ್ಟರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಾಲಿ ಧನಂಜಯ್ ಮದುವೆಗೆ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿತ್ತು.
ನೆಚ್ಚಿನ ನಟನ ಮದುವೆಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಶುಭ ಹಾರೈಸಿದ್ದರು. ಅಲ್ಲದೇ ಡಾಲಿ ಧನಂಜಯ್ ಮದುವೆಗೆ ಸ್ಯಾಂಡಲ್ವುಡ್ ಹಲವು ಕಲಾವಿದರು ಆಗಮಿಸಿ ನವಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಇದೀಗ ನಟ ಡಾಲಿ ಧನಂಜಯ ಖುದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಬರೆದುಕೊಂಡ ಡಾಲಿ, ಎಲ್ಲರಿಗೂ ನಮಸ್ಕಾರ, ಮದುವೆಗೆ ಬಂದು ಹರಸಿದ, ಬರಲಾಗದೆ ಇದ್ದರು ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಹೃದಯಪೂರ್ವಕ ನಮನಗಳು.
ಯಾವುದೇ ತೊಂದರೆ ಆಗದೆ ಸಮಾರಂಭ ಚೆನ್ನಾಗಿ ಆಗುವಲ್ಲಿ ಕುಟುಂಬದ ಜೊತೆ ಸ್ನೇಹಿತರು, ನೆಂಟರು, ಇಷ್ಟರು, ಮಾಧ್ಯಮ, ಪೊಲೀಸ್ ಇಲಾಖೆ, ಕಾರ್ಮಿಕರು, ಅಭಿಮಾನಿಗಳಾದಿಯಾಗಿ ಸಾಕಷ್ಟು ಜನರ ಶ್ರಮವಿದೆ. ಎಲ್ಲರಿಗೂ ತುಂಬು ಅಭಿಮಾನದ ಕೃತಜ್ಞತೆಗಳು. ತುಂಬ ಜನ ಸೇರಿದ್ದರಿಂದ, ಕೆಲವರಿಗೆ ನಮ್ಮನ್ನು ತಲುಪಲು ತೊಂದರೆಯುಂಟಾಗಿದ್ದಲ್ಲಿ, ತಲುಪಲು ಸಾಧ್ಯವಾಗಿರದಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ, ಖಂಡಿತವಾಗಿಯೂ ಇನ್ನಷ್ಟು ಒಳ್ಳೆ ವಿಷಯಗಳೊಂದಿಗೆ ಮತ್ತೆ ಸಿಗುತ್ತೇವೆ. ಆಶೀರ್ವಾದವಿರಲಿ.
ಇಷ್ಟೆಲ್ಲದರ ಮಧ್ಯೆ ಬಂದು ಹರಸಿದ ನನ್ನ ಚಿತ್ರರಂಗದ ಗೆಳೆಯರು, ತಾರೆಯರು, ಕಾರ್ಮಿಕರು, ಹಾಗೂ ನಮಗಾಗಿ ಕೆಲಸಕ್ಕೆ ನಿಂತ ಪ್ರೊಡಕ್ಷನ್ ಮ್ಯಾನೇಜರ್ಸ್ ತಂಡಕ್ಕೆ, ಒಟ್ಟಾಗಿ ನನ್ನ ಚಿತ್ರರಂಗದ ಕುಟುಂಬಕ್ಕೆ ಹೃಯಪೂರ್ವಕ ನಮನಗಳು. ಮದುವೆಯ ಮೆರಗು ಹೆಚ್ಚಿಸಿದ ಪ್ರೀತಿಯ ಅಭಿಮಾನಿಗಳಿಗೆ special thanks. ತಾಯಿ ಚಾಮುಂಡೇಶ್ವರಿಗೆ ಭಕ್ತಿಪೂರ್ವಕ ನಮನಗಳು ಎಂದಿದ್ದಾರೆ.