ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಜಾಗತಿಕ ಆರ್ಥಿಕತೆಯಲ್ಲಿ ಹೊಸ ಸಂಚಲನ ಮೂಡಿಸಲಿರುವ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಅಧಿಕೃತವಾಗಿ ಸಹಿ ಹಾಕಿದ್ದಾರೆ. ಪ್ರಧಾನಿ ಮೋದಿಯವರು ಈ ಐತಿಹಾಸಿಕ ಕ್ಷಣವನ್ನು “ಮದರ್ ಆಫ್ ಆಲ್ ಡೀಲ್ಸ್” ಎಂದು ಬಣ್ಣಿಸಿದ್ದಾರೆ.
ಒಪ್ಪಂದದ ಪ್ರಮುಖಾಂಶಗಳು:
ಈ ಒಪ್ಪಂದದಿಂದಾಗಿ ಭಾರತಕ್ಕೆ ಯುರೋಪಿಯನ್ ಒಕ್ಕೂಟದ ಎಲ್ಲಾ 27 ರಾಷ್ಟ್ರಗಳ ಮಾರುಕಟ್ಟೆಗೆ ಸುಲಭ ಪ್ರವೇಶ ಲಭಿಸಲಿದೆ.
ಭಾರತ ಮತ್ತು ಈ 27 ರಾಷ್ಟ್ರಗಳ ಒಟ್ಟು ಆರ್ಥಿಕತೆಯನ್ನು ಸೇರಿಸಿದರೆ, ಅದು ವಿಶ್ವದ ಒಟ್ಟು ಜಿಡಿಪಿಯ ಶೇ. 25ರಷ್ಟು ಆಗುತ್ತದೆ. ಇದು ಜಾಗತಿಕವಾಗಿ ಅತಿದೊಡ್ಡ ಆರ್ಥಿಕ ಬ್ಲಾಕ್ ಆಗಿ ಹೊರಹೊಮ್ಮಲಿದೆ.
ಸುಮಾರು 200 ಕೋಟಿ ಗ್ರಾಹಕರನ್ನು ಒಳಗೊಂಡ ಬೃಹತ್ ಮಾರುಕಟ್ಟೆ ಉದ್ಯಮಿಗಳಿಗೆ ಮುಕ್ತವಾಗಲಿದೆ.
ಈ ಒಪ್ಪಂದದಿಂದ ಭಾರತದ ಪ್ರಮುಖ ರಫ್ತು ವಲಯಗಳಿಗೆ ಭಾರಿ ಉತ್ತೇಜನ ಸಿಗಲಿದೆ:
ಜವಳಿ ಮತ್ತು ಸಿದ್ಧ ಉಡುಪುಗಳು
ಹರಳು ಮತ್ತು ಆಭರಣ
ಚರ್ಮೋದ್ಯಮ
ಸೇವಾ ವಲಯ
2007ರಲ್ಲಿ ಮೊದಲ ಬಾರಿಗೆ ಈ ಮಾತುಕತೆ ಆರಂಭವಾಗಿತ್ತಾದರೂ, ಟ್ಯಾರಿಫ್ ಮತ್ತು ನಿಯಮಗಳ ಸಂಘರ್ಷದಿಂದಾಗಿ 2013ರಲ್ಲಿ ಸ್ಥಗಿತಗೊಂಡಿತ್ತು. 2022ರಲ್ಲಿ ಪುನಾರಂಭಗೊಂಡ ಈ ಪ್ರಕ್ರಿಯೆ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ವೇಗ ಪಡೆದುಕೊಂಡು ಈಗ ಯಶಸ್ವಿಯಾಗಿದೆ.
ಈಗಾಗಲೇ ಬ್ರಿಟನ್ ಮತ್ತು ಇಎಫ್‌ಟಿಎ (ಸ್ವಿಟ್ಜರ್ಲ್ಯಾಂಡ್, ನಾರ್ವೇ ಇತ್ಯಾದಿ) ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಭಾರತಕ್ಕೆ, ಈಗ ಯುರೋಪಿಯನ್ ಒಕ್ಕೂಟದ ಜೊತೆಗಿನ ಈ ಒಪ್ಪಂದ “ಮುಕುಟಪ್ರಾಯ” ಎನಿಸಿಕೊಂಡಿದೆ.



