ನಾಳೆಯಿಂದ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಮಧ್ಯಪ್ರದೇಶ, ಬಿಹಾರ, ಅಸ್ಸಾಂ ಪ್ರವಾಸ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾಳೆಯಿಂದ (ಫೆಬ್ರವರಿ 23) 3 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರುಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ಪ್ರವಾಸ ಕೈಗೊಳ್ಳಲಿದ್ದಾರೆ.

ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ ಛತ್ತರ್ಪುರದಲ್ಲಿ ಬಾಗೇಶ್ವರ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿ, ಸೋಮವಾರ ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಭೋಪಾಲ್‌ನಲ್ಲಿ ನಡೆಯಲಿರುವ ಎರಡು ದಿನಗಳ ಜಾಗತಿಕ ಹೂಡಿಕೆದಾರರ ಶೃಂಗಸಭೆ (GIS) ಮಧ್ಯಪ್ರದೇಶವನ್ನು ಜಾಗತಿಕ ಹೂಡಿಕೆ ಕೇಂದ್ರವಾಗಿ ಸ್ಥಾಪಿಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಇಲಾಖಾ ಶೃಂಗಸಭೆಗಳು, ಔಷಧ ಮತ್ತು ವೈದ್ಯಕೀಯ ಸಾಧನಗಳು, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEs) ಕುರಿತು ವಿಶೇಷ ಅಧಿವೇಶನಗಳನ್ನು ಒಳಗೊಂಡಿರುತ್ತದೆ.

ಫೆಬ್ರವರಿ 24ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪ್ರಧಾನ ಮಂತ್ರಿ ಮೋದಿ ಭೋಪಾಲ್‌ನಲ್ಲಿ 2025ರ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ.

60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧಿಕಾರಿಗಳು, ಭಾರತದ 300ಕ್ಕೂ ಹೆಚ್ಚು ಪ್ರಮುಖ ಕೈಗಾರಿಕಾ ಮುಖಂಡರು ಮತ್ತು ನೀತಿ ನಿರೂಪಕರು ಸೇರಿದಂತೆ ಇತರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬಿಹಾರಕ್ಕೆ ಪ್ರಧಾನಿ ಮೋದಿ ಭೇಟಿ:
ಫೆಬ್ರವರಿ 24ರಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದ ಭಾಗಲ್ಪುರಕ್ಕೆ ಪ್ರಯಾಣಿಸಲಿದ್ದು, ಮಧ್ಯಾಹ್ನ 2.15ರ ಸುಮಾರಿಗೆ ಪಿಎಂ ಕಿಸಾನ್ ಯೋಜನೆಯ 19ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ಅಸ್ಸಾಂ ಭೇಟಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಗುವಾಹಟಿಗೆ ಪ್ರಯಾಣ ಬೆಳೆಸಲಿದ್ದು, ಫೆಬ್ರವರಿ 24ರಂದು ಸಂಜೆ 6 ಗಂಟೆ ಸುಮಾರಿಗೆ ಜುಮೋಯಿರ್ ಬಿನಂದಿನಿ (ಮೆಗಾ ಜುಮೋಯಿರ್) 2025 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 25ರಂದು ಬೆಳಿಗ್ಗೆ 10.45ರ ಸುಮಾರಿಗೆ ಪ್ರಧಾನ ಮಂತ್ರಿ ಮೋದಿ ಗುವಾಹಟಿಯಲ್ಲಿ ಅಡ್ವಾಂಟೇಜ್ ಅಸ್ಸಾಂ 2.0 ಹೂಡಿಕೆ ಮತ್ತು ಮೂಲಸೌಕರ್ಯ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ .
ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ನಾಯಕರು ಮತ್ತು ಹೂಡಿಕೆದಾರರು, ನೀತಿ ನಿರೂಪಕರು, ಉದ್ಯಮ ತಜ್ಞರು, ನವೋದ್ಯಮಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!