ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಘಾತ ಎದುರಿಸಿದೆ. ಭಾರತದ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.
ದುಬೈನಲ್ಲಿ ಶನಿವಾರ ಪಂದ್ಯಕ್ಕೂ ಮುನ್ನ ತಂಡದ ಅಂತಿಮ ಅಭ್ಯಾಸ ಅವಧಿಯ ವೇಳೆ ಕೊಹ್ಲಿಯ ಮೊಣಕಾಲಿಗೆ ಗಾಯವಾಗಿದ್ದು, ಅಭ್ಯಾಸ ಅವಧಿಯಲ್ಲಿ ಬಹುಕಾಲ ಅವರು ಕಾಲಿಗೆ ದೊಡ್ಡ ಐಸ್‌ಪ್ಯಾಕ್ ಇರಿಸಿಕೊಂಡೇ ಕಾಣಿಸಿಕೊಂಡಿದ್ದರು.
ಕಾಲಿಗೆ ದೊಡ್ಡ ಐಸ್‌ಪ್ಯಾಕ್ ಕಟ್ಟಿಕೊಂಡು ಡಗ್‌ಔಟ್‌ನಲ್ಲಿ ಕೊಹ್ಲಿ ವಿಶ್ರಾಂತಿ ಪಡೆಯುತ್ತಿರುವ ಸಾಕಷ್ಟು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಕೊಹ್ಲಿ ಫಿಟ್‌ನೆಸ್ ಬಗ್ಗೆ ಟೀಮ್ ಇಂಡಿಯಾದಲ್ಲೂ ಆತಂಕ ಶುರುವಾಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಆಡುತ್ತಾರೆ. ಅದೇ ಕಾರಣಕ್ಕಾಗಿ ಕೊಹ್ಲಿ ಫಿಟ್‌ನೆಸ್ ಈ ಪಂದ್ಯಕ್ಕೆ ಪ್ರಮುಖವಾಗಿದೆ.
ಚಾಂಪಿಯನ್ಸ್ ಟ್ರೋಫಿ ವರದಿ ಮಾಡಲು ತೆರಳಿರುವ ಹಲವು ಪತ್ರಕರ್ತರು ಕೊಹ್ಲಿಗೆ ಗಾಯವಾಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೂ ಬಿಸಿಸಿಐ ಮಾತ್ರ ಐಸ್‌ಪ್ಯಾಕ್ ಇರಿಸಿಕೊಂಡ ಕೊಹ್ಲಿಯ ವೈರಲ್ ಚಿತ್ರಗಳ ಬಗ್ಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಅಭ್ಯಾಸ ವೇಳೆ ಚೆಂಡು ಬಡಿದು ಗಾಯಗೊಂಡಿದ್ದಾರೆಯೇ ಅಥವಾ ಮೊಣಕಾಲಿನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡ ಕಾರಣಕ್ಕೆ ಐಸ್‌ಪ್ಯಾಕ್ ಇರಿಸಿಕೊಂಡಿದ್ದಾರೆಯೇ ಅನ್ನೋದು ಗೊತ್ತಾಗಿಲ್ಲ. ಆದರೆ, ಈ ಚಿತ್ರ ಮಾತ್ರ ಅಭಿಮಾನಿಗಳಲ್ಲಿ ತಳಮಳ ಮೂಡಿಸಿದೆ.