ಹೊಸದಿಗಂತ ವರದಿ ಹೂವಿನಹಡಗಲಿ:
ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಗೆ ಕಂಕಣಧಾರಣೆ, ಹಾಲು ಉಕ್ಕಿಸುವ ಮೂಲಕ ಬಿಲ್ಲಿಗೆ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ ಮಂಟಪದಲ್ಲಿ ಹಾಲು ಉಕ್ಕಿಸುವ ಮೂಲಕ ೧೧ ದಿನಗಳ ಕಾಲ ನಡೆಯುವ ಜಾತ್ರೆಗೆ ಚಾಲನೆ ನೀಡಲಾಯಿತು.
ದೇವಸ್ಥಾನದ ಮಂಟಪ ಆವರಣದಲ್ಲಿ ಆಕಳ ಸಗಣಿಯ ಕುಳ್ಳಿನಿಂದ (ಬೆರಣಿ) ಕಾಯಿಸಿದ ಹಾಲು, ಉತ್ತರ ದಿಕ್ಕಿಗೆ ಉಕ್ಕಿ ಹರಿದಿದ್ದು, ಕಾದ ಹಾಲು ಯಾವ ದಿಕ್ಕಿನ ಕಡೆಗೆ ಹರಿಯುತ್ತದೆಯೋ, ಆ ದಿಕ್ಕಿನ ಪ್ರದೇಶದಲ್ಲಿ ಮಳೆ ಬೆಳೆ ಹುಲುಸಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಕಳೆದ ಬಾರಿ ಉತ್ತರ ಈಶಾನ್ಯ ಕಡೆಗೆ ಹರಿದಿತ್ತು.
ಇದಕ್ಕೂ ಮುನ್ನ ಮಂಟಪದಲ್ಲಿ ವಿವಿಧ ಪುಷ್ಪಗಳಿಂದ ಮೈಲಾರಲಿಂಗೇಶ್ವರ ಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ಸ್ವಾಮಿಗೆ ಕಂಕಣಧಾರಣೆಯ ನಂತರದಲ್ಲಿ ದೇಗುಲ ವಂತ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಅವರು, ಆರ್ಚಕ ಪ್ರಮೋದ್ ಭಟ್, ಕಾರ್ಣಿಕ ನುಡಿಯುವ ಗೊರವಯ್ಯ ರಾಮಣ್ಣ, ಕಂಚಿವೀರರು, ಸರಪಳಿ ಪವಾಡ ಮಾಡುವ ಗೊರವಯ್ಯರಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಕಂಕಣಧಾರಣೆ ಮಾಡಿದರು.



