Tuesday, January 27, 2026
Tuesday, January 27, 2026
spot_img

ಬಾಯ್‌ಫ್ರೆಂಡ್‌ ಜತೆ ನವವಿವಾಹಿತೆ ಪರಾರಿ: ಪತಿ, ಮದುವೆ ಮಾಡಿಸಿದ ಮಾವ ಆತ್ಮಹತ್ಯೆ

ಹೊಸದಿಗಂತ ವರದಿ ದಾವಣಗೆರೆ:

ಪ್ರಿಯತಮನೊಂದಿಗೆ ನವವಿವಾಹಿತೆ ಪರಾರಿಯಾದ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳ ಹಿಂದೆಯಷ್ಟೇ ಆಕೆ ಕೈ ಹಿಡಿದಿದ್ದ ಪತಿ ಹಾಗೂ ಇವರಿಬ್ಬರ ಮದುವೆ ಮಾಡಿಸಿದ್ದ ಆಕೆಯ ಸೋದರಮಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನಲ್ಲಿ ವರದಿಯಾಗಿವೆ.

ತಾಲೂಕಿನ ಗುಮ್ಮನೂರು ಗ್ರಾಮದ ವಾಸಿ, ಖಾಸಗಿ ಕಂಪನಿಯಲ್ಲಿ ಹೆಚ್.ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರೀಶ್(30 ವರ್ಷ) ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನ ಸಾವಿನ ಸುದ್ದಿ ತಿಳಿದು ಮನನೊಂದ ನವವಿವಾಹಿತೆಯ ಸೋದರಮಾವ, ದಾವಣಗೆರೆ ಆನೆಕೊಂಡ ವಾಸಿ ರುದ್ರೇಶ(40 ವರ್ಷ) ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಎರಡೂವರೆ ತಿಂಗಳ ಹಿಂದೆ ಗುಮ್ಮನೂರು ಗ್ರಾಮದ ಹರೀಶನಿಗೆ ಆನೆಕೊಂಡದ ರುದ್ರೇಶ ತಮ್ಮ ಸಹೋದರಿಯ ಮಗಳಾದ ಸರಸ್ವತಿಯನ್ನು ತೋರಿಸಿ ಮದುವೆ ಮಾಡಿಸಿದ್ದರು. ಮದುವೆಯಾದ ಕೇವಲ 45 ದಿನಕ್ಕೆ ನವವಿವಾಹಿತ ಹರೀಶ್ ತನ್ನ ಪತ್ನಿಯ ವರ್ತನೆಯಿಂದ ರೋಸಿ, ಸಾವಿಗೆ ಕೊರಳೊಡ್ದಿದ್ದಾನೆ. ಸೊಸೆಯ ಬಾಳು ಚೆನ್ನಾಗಿರಲೆಂದು ಮದುವೆ ಮಾಡಿಸಿದ್ದ ರುದ್ರೇಶ್ ಕೂಡ ಇಹಲೋಕ ಯಾತ್ರೆ ಮುಗಿಸಿದ್ದಾರೆ.

ಮದುವೆಗೆ ಮುನ್ನವೇ ಕುಮಾರ ಎಂಬಾತನನ್ನು ಸರಸ್ವತಿ ಪ್ರೀತಿಸುತ್ತಿದ್ದಳು. ದಾವಣಗೆರೆಯಲ್ಲಿ ವಾಸಿಸುತ್ತಿದ್ದ ಹರೀಶನ ಜೊತೆಗೆ ವಿವಾಹವಾಗಿದ್ದರೂ, ನವ ದಂಪತಿ ಮೊದಲ ದಿನದಿಂದಲೂ ಖುಷಿಯಾಗಿರಲಿಲ್ಲ. ಸರಸ್ವತಿ ತನ್ನ ಪ್ರೇಮಿ ಕುಮಾರನೊಂದಿಗೆ ಓಡಿ ಹೋಗಿದ್ದರಿಂದ ಮರ್ಯಾದೆಗೆ ಅಂಜಿದ ಹರೀಶ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಮೃತ ಹರೀಶ ಬರೆದಿದ್ದ ಡೆತ್ ನೋಟ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ತೆಯಾಗಿದೆ. 45 ದಿನಗಳ ಹಿಂದಷ್ಟೇ ತನ್ನ ಮದುವೆಯಾಗಿದ್ದು, ಅಲ್ಲಿಂದ ಈವರೆಗೂ ನೆಮ್ಮದಿಯೇ ಇಲ್ಲವಾಗಿದೆ. ಅನಗತ್ಯವಾಗಿ ಪತ್ನಿ ಸರಸ್ವತಿ ಕಿರುಕುಳ ನೀಡುತ್ತಿದ್ದಳು. ಬೇರೆ ಯುವಕನೊಂದಿಗೆ ಓಡಿ ಹೋದ ಆಕೆ ನಾನು ಹಿಂಸೆ ನೀಡುತ್ತಿದ್ದೇನೆಂದು ಸುಳ್ಳು ಆರೋಪ ಮಾಡುತ್ತಿದ್ದಾಳೆ. ಪತ್ನಿ ಸರಸ್ವತಿ ಹಾಗೂ ಆಕೆಯ ಸಂಬಂಧಿಗಳಿಂದ ತಮಗೆ ಜೀವ ಬೆದರಿಕೆ ಇತ್ತು. ನಾನು ಯಾವುದೇ ತಪ್ಪು ಮಾಡಿರಲಿಲ್ಲ. ನನಗೆ ಮಾನ, ಮರ್ಯಾದೆ ಮುಖ್ಯ. ಆ ಕಾರಣದಿಂದ ಅದನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆಂದು ಹರೀಶ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹರೀಶನ ಆತ್ಮಹತ್ಯೆ ಪ್ರಕರಣ, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆನೆಕೊಂಡ ರುದ್ರೇಶರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !