ಹೊಸದಿಗಂತ ಡಿಜಿಟಲ್ ಡೆಸ್ಕ್;
ಹಿರಿಯ ನಾಯಕ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ಹೊರಹಾಕಿದ್ದು, ಇದರ ನಡುವೆ ಶಶಿ ತರೂರ್ ಪೋಸ್ಟ್ ಒಂದನ್ನು ಮಾಡಿದ್ದು, ಹೊಸ ಚರ್ಚೆ ಹುಟ್ಟು ಹಾಕಿದೆ.
ಭಾರತ – ಬ್ರಿಟಿಷ್ ವ್ಯಾಪಾರ ಒಪ್ಪಂದದ ಕುರಿತು ಚರ್ಚೆಯ ನಂತರ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಅವರೊಂದಿಗೆ ಇರುವ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಇದೀಗ ಬಿಜೆಪಿ ನಾಯಕನೊಂದಿಗೆ ತರೂರ್ ಅವರ ಈ ಫೊಟೋ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಇದಕ್ಕೆ ಕಾರಣ ನಿನ್ನೆ ಕಾಂಗ್ರೆಸ್ ಪಕ್ಷವು ನನಗೆ ಜವಾಬ್ದಾರಿಯನ್ನು ನೀಡಿದರೆ ಮಾತ್ರ ನಾನು ಕೂಡ ಪಕ್ಷದ ಪಾಲಿಗೆ ಇರುತ್ತೇನೆ. ಇಲ್ಲದಿದ್ದರೆ, ನನಗೆ ಬೇರೆ ಆಯ್ಕೆಗಳಿವೆ ಎಂದಿದ್ದರು. ಇದರ ನಡುವೆ ಈ ಪೋಸ್ಟ್ ಹೊಸ ಚರ್ಚೆಗೆ ಕಾರಣವಾಗಿದೆ.
https://x.com/ShashiTharoor/status/1894225091149664308
ಕೇರಳದ ತಿರುವನಂತಪುರಂನಿಂದ ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿರುವ ತರೂರ್ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಬ್ರಿಟನ್‌ನ ವ್ಯವಹಾರ ಮತ್ತು ವ್ಯಾಪಾರದ ವಿದೇಶಾಂಗ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್ ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ FTA ಮಾತುಕತೆಗಳನ್ನು ನಡೆಸಲಾಯಿತು ಎಂದು ಹೇಳಿದ್ದಾರೆ.
ಇತ್ತೀಚೆಗೆ ಶಶಿ ತರೂರ್ ಅವರು ಕೇರಳದ ಸಿಪಿಎಂ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ(ಎಲ್‌ಡಿಎಫ್) ಸರ್ಕಾರದ ನೀತಿಗಳನ್ನು ಹೊಗಳಿದ ನಂತರ, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ ಹಳಸಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಶಶಿ ತರೂರ್, ‘ನಾನು ಕೇರಳದ ಎಲ್‌ಡಿಎಫ್ ಸರ್ಕಾರವನ್ನು ಹೊಗಳಿಲ್ಲ. ಬದಲಾಗಿ ಕೇರಳದ ಸ್ಟಾರ್ಟ್‌ಅಪ್ ವಲಯದ ಪ್ರಗತಿಯನ್ನು ಮಾತ್ರ ಎತ್ತಿ ತೋರಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದರು.
ಇದಕ್ಕೂ ಮೊದಲು ತರೂರ್ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು. ಟ್ರಂಪ್ ಜೊತೆಗಿನ ಮೋದಿ ಮಾತುಕತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಶಿ ತರೂರ್ ಅವರ ಈ ಹೇಳಿಕೆ ಕೂಡ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು.