ಹೊಸದಿಗಂತ ಡಿಜಿಟಲ್ ಡೆಸ್ಕ್;
2026 ರಿಂದ ವರ್ಷಕ್ಕೆ ಎರಡು ಬಾರಿ 10 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education – CBSE ) ಕರಡು ನಿಯಮಗಳನ್ನು ಅನುಮೋದಿಸಿದೆ.
ಕರಡು ನಿಯಮಗಳನ್ನು ಈಗ ಸಾರ್ವಜನಿಕರ ಮುಂದೆ ಇಡಲಾಗುವುದು. ಮಾರ್ಚ್ 9 ರವರೆಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು ಎಂದು ಸಿಬಿಎಸ್ಇ ಹೇಳಿದೆ. ಸಾರ್ವಜನಿಕರ ಆಕ್ಷೇಪಣೆ ಬಳಿಕ ನೀತಿಯನ್ನು ಅಂತಿಮಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಡು ನಿಯಮಗಳನ್ನು ಅನುಮೋದಿಸಿದರೆ, ಮೊದಲ ಹಂತದ ಪರೀಕ್ಷೆ ಫೆಬ್ರವರಿ 17 ರಿಂದ ಮಾರ್ಚ್ 6 ರವರೆಗೆ ನಡೆಸಲಾಗುವುದು ಮತ್ತು ಎರಡನೇ ಹಂತವನ್ನು ಮೇ 5 ರಿಂದ 20 ರವರೆಗೆ ನಡೆಸಲಾಗುವುದು.
ಈ ಎರಡೂ ಪರೀಕ್ಷೆಗಳನ್ನು ಪೂರ್ಣ ಪಠ್ಯಕ್ರಮದಲ್ಲಿ ನಡೆಸಲಾಗುವುದು, ಜೊತೆಗೆ ಅಭ್ಯರ್ಥಿಗಳಿಗೆ ಎರಡು ಆವೃತ್ತಿಗಳಲ್ಲಿ ಒಂದೇ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗುವುದು. ಅದೇ ರೀತಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಎರಡೂ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೋರ್ಡ್ ಪರೀಕ್ಷೆಗಳ ಮೊದಲ ಮತ್ತು ಎರಡನೇ ಆವೃತ್ತಿಗಳು ಪೂರಕ ಪರೀಕ್ಷೆಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಯಾವುದೇ ವಿಶೇಷ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು. ಸಿಬಿಎಸ್ಇ ತೆಗೆದುಕೊಂಡ ಕ್ರಮವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ಅನುಗುಣವಾಗಿದೆ.
ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳ ಎರಡೂ ಆವೃತ್ತಿಗಳು ಪೂರಕ ಪರೀಕ್ಷೆಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಯಾವುದೇ ವಿಶೇಷ ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಕರಡು ನಿಯಮಗಳು ಪ್ರಸ್ತಾಪಿಸಿವೆ.