ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಮುಕ್ತಿ ಮೋರ್ಚಾದ ರಾಜ್ಯಸಭಾ ಸಂಸದೆ ಮಹುವಾ ಮಾಜಿ ಪ್ರಯಾಣಿಸುತ್ತಿದ್ದ ಕಾರು ಮಹಾಕುಂಭದಿಂದ ಹಿಂದಿರುಗುವಾಗ ಲತೇಹಾರ್ ಬಳಿ ಅಪಘಾತಕ್ಕೀಡಾಗಿದ್ದು, ಸಂಸದೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅವರನ್ನು ರಾಂಚಿಯ ಆರ್ಕಿಡ್ ವೈದ್ಯಕೀಯ ಕೇಂದ್ರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯಸಭಾ ಸದಸ್ಯೆಯಾಗಿರುವ ಮಹುವಾ ಎಡ ಮಣಿಕಟ್ಟಿನಲ್ಲಿ ಮೂಳೆ ಮುರಿತ ಉಂಟಾಗಿದ್ದು, ಪಕ್ಕೆಲುಬುಗಳಿಗೆ ಸ್ವಲ್ಪ ಹಾನಿಯಾಗಿದೆ. ಅಪಘಾತ ನಡೆದಾಗ ಅವರ ಮಗ ಮತ್ತು ಸೊಸೆ ಕೂಡ ಕಾರಿನಲ್ಲಿದ್ದರು. ಮಹುವಾ ಅವರ ಮಗ ಸೋಮ್ವಿತ್ ಮಾಜಿ ಅವರು, ತಾವು ಕಾರನ್ನು ಚಾಲನೆ ಮಾಡುತ್ತಿದ್ದಾಗ ಬೆಳಗಿನ ಜಾವ ನಿದ್ರೆ ಬಂದಂತಾದಾಗ ಈ ಘಟನೆ ಸಂಭವಿಸಿದೆ.
ನಾವು ಪ್ರಯಾಗರಾಜ್‌ನ ಮಹಾ ಕುಂಭದಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ, ನನ್ನ ತಾಯಿ ಹಾಗೂ ಪತ್ನಿ ಹಿಂದಿನ ಸೀಟಿನಲ್ಲಿದ್ದರು. ನಾನು ಕಾರು ಓಡಿಸುತ್ತಿದ್ದೆ, ಆಗ ಒಮ್ಮೆ ಕಣ್ಣುಮುಚ್ಚಿದಂತಾಗಿ ಅಪಘಾತ ಸಂಭವಿಸಿದೆ. ತಕ್ಷಣ ಕಾರಿನ ಒಳಗೆಲ್ಲಾ ಹೊಗೆ ತುಂಬಿಕೊಂಡಿತ್ತು, ನಾವು ಹೊರಗೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.ತಾಯಿಗೆ ಮಣಿಕಟ್ಟಿಗೆ ಪೆಟ್ಟುಬಿದ್ದಿತ್ತು, ಎದೆ ಹಾಗೂ ಕೈ ತುಂಬಾ ನೋಯುತ್ತಿದೆ ಎಂದು ಹೇಳಿದ್ದಾಗಿ ಮಹುವಾ ಪುತ್ರ ತಿಳಿಸಿದ್ದಾರೆ.