ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ನಾಗರ ಕರ್ನೂಲ್ ನ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗ ಕುಸಿದಿದ್ದು, ಅದರ ಮತ್ತೊಂದು ಭಾಗದಲ್ಲಿ ಸಿಕ್ಕಿಬಿದ್ದಿರುವ ಎಂಟು ಜನರನ್ನು ರಕ್ಷಿಸುವ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ.
ಸುರಂಗದ ಕೊನೆಯ 40 ಮೀಟರ್ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದಂತೆ ಕಾಣುತ್ತಿದೆ. ಎಸ್‌ಎಲ್‌ಬಿಸಿ ಸುರಂಗ ಕುಸಿದು ಬಿದ್ದ ಪ್ರದೇಶ ಭೀಕರ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಟನಲ್ ಬೋರಿಂಗ್ ಮಿಷನ್‌ನಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಸೇನೆ ಮತ್ತು ಎನ್‌ಡಿಆರ್‌ಎಫ್‌ನ 34 ಸದಸ್ಯರ ವಿಶೇಷ ತಂಡ ಮಂಗಳವಾರ ಸುರಂಗದೊಳಗೆ ಪ್ರವೇಶ ಮಾಡಿವೆ. ತಕ್ಷಣದ ರಕ್ಷಣಾ ಕಾರ್ಯಾಚರಣೆಗೆ ಪರಿಸ್ಥಿತಿಗಳು ಅನುಕೂಲಕರವಾಗಿಲ್ಲ ಎಂದು ಹೇಳಲಾಗುತ್ತಿದೆ.
ಮೇಲ್ಛಾವಣಿ ಕುಸಿದ ಪ್ರದೇಶದಲ್ಲಿ ಶೇ.70ರಷ್ಟು ಕೆಸರು ಹಾಗೂ ಶೇ.30ರಷ್ಟು ನೀರು ಇರುವುದರಿಂದ ನಡೆದಾಡುವುದೇ ಕಷ್ಟವಾಗುತ್ತಿದೆ. ಅದರಲ್ಲೂ 13.85 ಕಿ.ಮೀ ಉದ್ದದ ಸುರಂಗದ ಕೊನೆಯ 40 ಮೀಟರ್ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಇಲ್ಲಿ ಅಪಾರ ಪ್ರಮಾಣ ಕೆಸರು ಇರುವುದರಿಂದ ಅದರಲ್ಲಿ ಕೈಕಾಲು ಕೂಡ ಚಲಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಎನ್‌ಜಿಆರ್‌ಐ ಮತ್ತು ಜಿಎಸ್‌ಐ ಸಹಯೋಗದೊಂದಿಗೆ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡವು ಈ ಪ್ರದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದೆ.