Wednesday, January 28, 2026
Wednesday, January 28, 2026
spot_img

ದಿನದಲ್ಲಿ 12 ಗಂಟೆ ಗಸ್ತು, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ʼಅಕ್ಕಪಡೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿಯೇ ಅಕ್ಕಪಡೆ ರಚಿಸಲಾಗಿದ್ದು, ದಿನದಲ್ಲಿ 12 ಗಂಟೆ ಗಸ್ತು ತಿರುಗಲಿದೆ. ದೌರ್ಜನ್ಯಕ್ಕೊಳಗಾಗಿ ದೂರು ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ವಿಶೇಷ ಅಧಿವೇಶನದ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ತೆರೆಯಲಾಗಿದೆ ಎಂದರು.

ಕಳೆದ ವರ್ಷ ನ.28ರಂದು ಅಕ್ಕಪಡೆಗೆ ಚಾಲನೆ ನೀಡಲಾಗಿದ್ದು, ಈ ಅಕ್ಕಪಡೆ ಎಲ್ಲೆಡೆ ಗಸ್ತು ತಿರುಗುತ್ತದೆ. ನಮ್ಮ ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದ್ದು, 1098 ಸಂಖ್ಯೆಗೆ ಕರೆ ಮಾಡಬಹುದು. ಅಕ್ಕಪಡೆಗೆ ಮಹಿಳಾ ಸಹಾಯವಾಣಿ 181, ಜೊತೆಗೆ ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಕರೆ ಮಾಡಬಹುದು. ದೌರ್ಜನ್ಯ ತಡೆಗಟ್ಟಲು ಗ್ರಾಮ ಪಂಚಾಯಿತಿಯಿಂದ ಹಿಡಿದು ಮೇಲ್ಮಟ್ಟದವರೆಗೂ ಸಮಿತಿ ರಚಿಸಲಾಗಿದೆ ಎಂದು ಉತ್ತರಿಸಿದರು.

ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿರುತ್ತದೆ. ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಬೀದಿ ನಾಟಕಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ, ಆಕಾಶವಾಣಿಯಲ್ಲಿ ಒಂದೂವರೆ ತಿಂಗಳ ಪ್ರಚಾರ ನೀಡಲಾಗಿದೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !