ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಲವ್ ಬರ್ಡ್ಸ್ ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ನಟಿ ಕರೀನಾ ಕಪೂರ್ ಮತ್ತೆ ಭೇಟಿಯಾಗಿದ್ದು, ಒಬ್ಬರನ್ನೊಬ್ಬರು ತಬ್ಬಿಕೊಂಡು ಮಾತನಾಡಿದ್ದಾರೆ.
ಒಂದು ಕಾಲದಲ್ಲಿ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ ಜೊತೆಯಾಗಿ ನಟಿಸಿದ ‘ಜಬ್ ವಿ ಮೆಟ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ನಂತರದ ದಿನಗಳಲ್ಲಿ ಅವರ ನಡುವೆ ಬಿರುಕು ಮೂಡಿತು. ಬಳಿಕ ಅವರಿಬ್ಬರು ಬ್ರೇಕಪ್ ಮಾಡಿಕೊಂಡರು. ಇದೀಗ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅವರು ಮತ್ತೆ ಭೇಟಿ ಆಗಿದ್ದಾರೆ.
ಐಫಾ ಸಮಾರಂಭದ ಸುದ್ದಿಗೋಷ್ಠಿಯಲ್ಲಿ ಖುಷಿ ಖುಷಿಯಿಂದ ಮಾತನಾಡುತ್ತಾ ಎಲ್ಲರ ಕಣ್ಣು ಕುಕ್ಕಿದ್ದಾರೆ. ಮಾಜಿ ಪ್ರೇಮಿಗಳು ಹೀಗೆ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಬ್ರೇಕಪ್ ಬಳಿಕ ಒಬ್ಬರನ್ನೊಬ್ಬರು ಅವಾಯ್ಡ್ ಮಾಡಿಕೊಂಡು ತಿರುಗುತ್ತಿದ್ದ ಅವರು ಈಗ ಸಹಜ ಜೀವನಕ್ಕೆ ಮರಳಿದ್ದಾರೆ.
ಈ ಘಟನೆಯ ಬಗ್ಗೆ ಶಾಹಿದ್ ಕಪೂರ್ ಅವರಿಗೆ ಪ್ರಶ್ನೆ ಕೇಳಲಾಯಿತು. ಬಹಳ ದಿನಗಳ ನಂತರ ಕರೀನಾ ಅವರನ್ನು ಭೇಟಿಯಾಗಿದ್ದು ಹೇಗನಿಸಿತು ಎಂದು ಕೇಳಿದ್ದಕ್ಕೆ ಶಾಹಿದ್ ಉತ್ತರ ನೀಡಿದ್ದಾರೆ. ‘ನಮಗೆ ಇದೆಲ್ಲ ಹೊಸದೇನೂ ಅಲ್ಲ. ಇಂದು ವೇದಿಕೆ ಮೇಲೆ ಭೇಟಿ ಆಗಿದ್ದೇವೆ ಅಷ್ಟೇ. ನಾವು ಆಗಾಗ ಅಲ್ಲಿ ಇಲ್ಲಿ ಭೇಟಿ ಆಗುತ್ತಲೇ ಇರುತ್ತೇವೆ. ನಮಗೆ ಅದು ತುಂಬ ಸಹಜ. ಜನರಿಗೆ ಖುಷಿ ಆಗಿದ್ದರೆ ನಮಗೂ ಖುಷಿ’ ಎಂದು ಶಾಹಿದ್ ಕಪೂರ್ ಹೇಳಿದ್ದಾರೆ.
2024ರಲ್ಲಿ ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಅವರು ಒಂದು ಸಮಾರಂಭದಲ್ಲಿ ಮುಖಾಮುಖಿ ಆಗುವ ಸಂದರ್ಭ ಬಂದಿತ್ತು. ಆಗ ಕರೀನಾ ಅವರು ಶಾಹಿದ್ ಕಪೂರ್ ಅವರನ್ನು ಬಿಟ್ಟು ಇನ್ನುಳಿದವರನ್ನು ಮಾತನಾಡಿಸಿ ಮುಂದೆ ಸಾಗಿದ್ದರು. ಈಗ ಆ ಘಟನೆಯನ್ನು ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.