ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ಟ್ರಾಫಿಕ್ ಜಂಕ್ಷನ್‌ನಲ್ಲಿ ಬಿಎಂಡಬ್ಲ್ಯೂ ಕಾರಿನಿಂದ ಇಳಿದು ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕ ವಿಡಿಯೋ ಮಾಡಿ ಕ್ಷಮೆಯಾಚಿಸಿದ್ದಾನೆ.
ಪುಣೆಯ ಯೆರವಾಡಾದ ಶಾಸ್ತ್ರಿನಗರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಯುವಕನನ್ನು ಗೌರವ್ ಅಹುಜಾ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪೊಲೀಸರು ಕಿಡಿಗೇಡಿಯ ಬೆನ್ನುಬಿದ್ದಿದ್ದರು. ಅಲ್ಲದೇ ಕೃತ್ಯ ಎಸಗಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಬೆನ್ನಲ್ಲೇ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ಗೌರವ್ ಅಹುಜಾ, ನಾನು ಮಾಡಿದ ಕೃತ್ಯ ನನಗೇ ನಾಚಿಕೆಯಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.
ನಾನು ಗೌರವ್ ಅಹುಜಾ, ಪುಣೆಯ ನಿವಾಸಿ. ನಾನು ಮಾಡಿದ ಕೃತ್ಯದಿಂದ ನನಗೆ ತುಂಬಾ ನಾಚಿಕೆಯಾಗುತ್ತಿದೆ. ನಾನು ಪುಣೆ, ಮಹಾರಾಷ್ಟ್ರದ ಜನತೆ ಮಾತ್ರವಲ್ಲ ಇಡೀ ದೇಶದ ಎಲ್ಲಾ ಜನರಲ್ಲಿ ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ. ಪೊಲೀಸ್ ಇಲಾಖೆ, ಡಿಸಿಎಂ ಏಕನಾಥ್ ಶಿಂಧೆ ಅವರಿಗೂ ಕ್ಷಮೆಯಾಚಿಸುತ್ತೇನೆ. ಇದೊಂದು ಬಾರಿ ಕ್ಷಮಿಸಿ, ಮುಂದೆ ಇಂತಹ ತಪ್ಪು ಎಂದಿಗೂ ಮಾಡುವುದಿಲ್ಲ ಎಂದು ವೀಡಿಯೋನಲ್ಲಿ ಹೇಳಿಕೊಂಡಿದ್ದಾನೆ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.